ADVERTISEMENT

ಉದ್ಯೋಗಿಗಳಿಂದ ತಪ್ಪು ಮಾಹಿತಿ: ಐಟಿ ಕ್ಷೇತ್ರದಲ್ಲಿ ಅಧಿಕ

ಆಥ್‌ಬ್ರಿಜ್‌ ಕಂಪನಿಯ ವರದಿಯಲ್ಲಿ ಉಲ್ಲೇಖ

ಪಿಟಿಐ
Published 4 ಏಪ್ರಿಲ್ 2021, 7:17 IST
Last Updated 4 ಏಪ್ರಿಲ್ 2021, 7:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕಳೆದ ವರ್ಷ ಐಟಿ ಕ್ಷೇತ್ರದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿ 100 ಜನ ಅಭ್ಯರ್ಥಿಗಳ ಪೈಕಿ 8 ಜನರು ತಪ್ಪು ಮಾಹಿತಿ ನೀಡಿದ್ದಾರೆ. ಉದ್ಯೋಗಿಗಳು ಒದಗಿಸಿರುವ ಮಾಹಿತಿಯಲ್ಲಿ ಗರಿಷ್ಠ ಪ್ರಮಾಣದ ವ್ಯತ್ಯಾಸ ಐಟಿ ವಲಯದಲ್ಲಿಯೇ ಕಂಡು ಬಂದಿದೆ ಎಂದು ಆಥ್‌ಬ್ರಿಜ್‌ ಸಂಸ್ಥೆ ಹೇಳಿದೆ.

ಆಥ್‌ಬ್ರಿಜ್‌ ಕಂಪನಿಯು ಉದ್ಯೋಗಿಗಳ ಮಾಹಿತಿ ನಿರ್ವಹಣೆ ಹಾಗೂ ಉದ್ಯಮಗಳಿಗೆ ಅಗತ್ಯವಿರುವ ಗುಪ್ತಮಾಹಿತಿ ಒದಗಿಸುತ್ತದೆ. ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ 6ನೇ ವಾರ್ಷಿಕ ವರದಿಯಲ್ಲಿ ಈ ವಿಷಯವನ್ನು ಉಲ್ಲೇಖಿಸಿದೆ.

ಐಟಿ ಕ್ಷೇತ್ರದಲ್ಲಿರುವ ಉದ್ಯೋಗಿಗಳು ಅರ್ಜಿಯಲ್ಲಿ ನಮೂದಿಸಿದ್ದ ಮಾಹಿತಿಯನ್ನು ಪರಿಶೀಲನೆ ಮಾಡಲಾಯಿತು. ವಾಸ್ಯವಾಂಶಗಳಿಗೂ ಅರ್ಜಿಯಲ್ಲಿರುವ ಮಾಹಿತಿಗೂ ಭಾರಿ ವ್ಯತ್ಯಾಸವಿರುವುದು ಕಂಡು ಬಂದಿತು. ಈ ಪ್ರಮಾಣ ಶೇ 16.60ರಷ್ಟಿದೆ ಎಂದು ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಅಜಯ್‌ ಟ್ರೆಹಾನ್‌ ಹೇಳಿದ್ದಾರೆ.

ADVERTISEMENT

ಐಟಿ ನಂತರದ ಸ್ಥಾನದಲ್ಲಿ ಆರೋಗ್ಯ ಕ್ಷೇತ್ರದ ಕಂಪನಿಗಳ ಉದ್ಯೋಗಿಗಳ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಈ ಪ್ರಮಾಣ ಶೇ 12ರಷ್ಟಿದೆ ಎಂದು ಅವರು ತಿಳಿಸಿದ್ದಾರೆ.

ರಿಟೇಲ್‌ ಉದ್ಯಮ ಕ್ಷೇತ್ರದಲ್ಲಿ ಶೇ 10.22, ಬ್ಯಾಂಕಿಂಗ್‌ ಮತ್ತು ಫೈನಾನ್ಸಿಯಲ್‌ ಸರ್ವೀಸ್‌, ವಿಮೆ (ಬಿಎಫ್‌ಎಸ್‌ಐ) ಹಾಗೂ ಫಾರ್ಮಾ ಕ್ಷೇತ್ರದಲ್ಲಿನ ಉದ್ಯೋಗಿಗಳು ನೀಡಿರುವ ಮಾಹಿತಿಯಲ್ಲಿನ ವ್ಯತ್ಯಾಸದ ಪ್ರಮಾಣ ಕ್ರಮವಾಗಿ ಶೇ 9.76 ಹಾಗೂ ಶೇ 9.65ರಷ್ಟಿದೆ ಎಂದು ಆಥ್‌ಬ್ರಿಜ್‌ನ ವರದಿಯಲ್ಲಿ ವಿವರಿಸಲಾಗಿದೆ.

‘35 ರಿಂದ 39 ವರ್ಷ ವಯೋಮಾನದ ಅಭ್ಯರ್ಥಿಗಳು ನೀಡಿದ ಮಾಹಿತಿಯಲ್ಲಿ ಗರಿಷ್ಠ ಮಟ್ಟದ ವ್ಯತ್ಯಾಸ (ಶೇ 9.09) ಕಂಡು ಬಂದಿದೆ. ಅಧಿಕ ಪ್ರೋತ್ಸಾಹ ಧನ ಪ್ಯಾಕೇಜ್‌, ಉತ್ತಮ ಉದ್ಯೋಗಾವಕಾಶಗಳ ಮೇಲೆ ಕಣ್ಣಿಟ್ಟು, ತಪ್ಪು ಮಾಹಿತಿ ನೀಡಿದ್ದು ಕಂಡು ಬಂದಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಅಭ್ಯರ್ಥಿಗಳ ಹಿನ್ನೆಲೆಯನ್ನು ಕಟ್ಟುನಿಟ್ಟಾಗಿ ಪರಿಶೀಲನೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಹೀಗಾಗಿ, ಕಳೆದ ಮೂರು ವರ್ಷಗಳಿಂದ ಅಭ್ಯರ್ಥಿಗಳು ತಪ್ಪು ಮಾಹಿತಿ ನೀಡುತ್ತಿರುವುದು ಸಹ ಇಳಿಕೆಯಾಗಿದೆ’ ಎಂದು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.