ADVERTISEMENT

ಮೋದಿ ಮಣಿಪುರ ಭೇಟಿಗೆ ವೀಸಾ ಬೇಕಿಲ್ಲ: ಕಾಂಗ್ರೆಸ್‌ ವ್ಯಂಗ್ಯ

ಪಿಟಿಐ
Published 11 ಮಾರ್ಚ್ 2025, 8:25 IST
Last Updated 11 ಮಾರ್ಚ್ 2025, 8:25 IST
<div class="paragraphs"><p>ನರೇಂದ್ರ ಮೋದಿ, ಜೈರಾಮ್ ರಮೇಶ್</p></div>

ನರೇಂದ್ರ ಮೋದಿ, ಜೈರಾಮ್ ರಮೇಶ್

   

(ಪಿಟಿಐ ಚಿತ್ರಗಳು)

ನವದೆಹಲಿ: ಕೇಂದ್ರ ಸರ್ಕಾರವು ಮಣಿಪುರದ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ರೀತಿಗೆ ವಿರೋಧ ಪಕ್ಷ ಕಾಂಗ್ರೆಸ್‌ ಮಂಗಳವಾರ ತೀವ್ರ ಕಿಡಿಕಾರಿದೆ. 

ADVERTISEMENT

ಜನಾಂಗೀಯ ಹಿಂಸಾಚಾರದಿಂದ ನಲುಗುತ್ತಿರುವ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಲು ಪ್ರಧಾನಿ ಮೋದಿ ಅವರಿಗೆ ವೀಸಾ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿರುವ ಕಾಂಗ್ರೆಸ್‌, ಬಂದೂಕಿನ ನಳಿಕೆಯಿಂದ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದೆ.

ಮಣಿಪುರದ ಬಜೆಟ್ ಮತ್ತು ಪೂರಕ ಅನುದಾನದ ಬೇಡಿಕೆಗಳ ಮೇಲಿನ ಜಂಟಿ ಚರ್ಚೆಯಲ್ಲಿ ಭಾಗವಹಿಸಿದ ಕಾಂಗ್ರೆಸ್‌ ಸಂಸದರು, ರಾಜ್ಯ ಬಜೆಟ್‌ನ ಅನುದಾನ ಹಂಚಿಕೆಯಲ್ಲಿ ದೋಷವಿದೆ. ಇದು ನೂರಾರು ಜನರು ಹತರಾದ ಮತ್ತು ಸುಮಾರು 60,000 ಜನರು ನಿರಾಶ್ರಿತರಾದ ಪರಿಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವುದರಿಂದ ಮಣಿಪುರದ ಬಜೆಟ್‌ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಸಂಸತ್ತಿನಲ್ಲಿ ಮಂಡಿಸಿದರು. ‘ಈಶಾನ್ಯ ರಾಜ್ಯದಲ್ಲಿ ಕೆಲವು ವಿರಳ ಘಟನೆಗಳನ್ನು ಹೊರತುಪಡಿಸಿ ಒಟ್ಟಾರೆ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಸುಧಾರಿಸಿದೆ. ಮಣಿಪುರದ ತ್ವರಿತ ಆರ್ಥಿಕ ಅಭಿವೃದ್ಧಿಗೆ ಹಣಕಾಸು ನೆರವು ನೀಡಲಾಗುವುದು’ ಎಂದು ಅವರು ಭರವಸೆ ನೀಡಿದರು. 

ಇನ್ನರ್‌ ಮಣಿಪುರದ ಕಾಂಗ್ರೆಸ್‌ ಸಂಸದ ಎ.ಬಿಮಲ್‌ ಅಕೋಯಿಜಮ್‌ ಅವರು, ‘ಪ್ರಧಾನಿಯವರು ರಾಜ್ಯಕ್ಕೆ ಭೇಟಿ ನೀಡದೇ ಮಣಿಪುರದ ಜನತೆಗೆ ನೋವುಂಟು ಮಾಡಿದ್ದಾರೆ. ಅವರು ಭೇಟಿ ನೀಡುತ್ತಾರೊ ಇಲ್ಲವೊ ನಮಗೆ ಆ ವಿಷಯ ಬೇಡ. ಅದು ಇನ್ನು ಮುಂದೆ ಅಪ್ರಸ್ತುತ. ಆದರೆ, ಮಣಿಪುರಕ್ಕೆ ಭೇಟಿ ನೀಡಲು ಪ್ರಧಾನಿಯವರಿಗೆ ವೀಸಾ ಅಗತ್ಯವಿಲ್ಲವೆನ್ನುವುದು ದೇಶದ ಇತರ ಭಾಗದವರಿಗೂ ಗೊತ್ತಾಗಲಿ. ಮೋದಿ ಅವರು ಉಕ್ರೇನ್‌ಗೆ ಹೋಗಿ ಅಲ್ಲಿ ಶಾಂತಿ ಸ್ಥಾಪನೆ ಬಗ್ಗೆ ಮಾತನಾಡಿ ಬರುತ್ತಾರೆ. ಆದರೆ, ಅವರು ತಮ್ಮದೇ ಸ್ವಂತ ದೇಶದಲ್ಲಿ ನಾಗರಿಕರ ಹತ್ಯೆ ನಡೆಯುತ್ತಿದ್ದರೂ ಮತ್ತು 60 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದರೂ ಅತ್ತ ಸುಳಿಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರ ನಿರ್ಮಾಣದಲ್ಲಿ ಮಣಿಪುರ ನಿರ್ಮಾಣವೂ ಸೇರಿದೆ. ನೀವು ಮಣಿಪುರವನ್ನು ನಿರ್ಮಿಸಲು ಬಯಸದಿದ್ದರೆ, ನಿಮಗೆ ಮಣಿಪುರವನ್ನು ಆಳುವ ಹಕ್ಕಿಲ್ಲ.
– ಆಲ್ಫ್ರೆಡ್ ಕೆ. ಎಸ್. ಆರ್ಥರ್, ಔಟರ್‌ ಮಣಿಪುರದ ಸಂಸದ
ಮಣಿಪುರದಲ್ಲಿ ಬಂದೂಕಿನ ನಳಿಕೆಯಿಂದ ಶಾಂತಿ ಪುನಃ ಸ್ಥಾಪಿಸಲು ಸಾಧ್ಯವಿಲ್ಲ. ರಾಜಕೀಯ ಪರಿಹಾರ ಮಾತ್ರ ಉತ್ತಮ ಮಾರ್ಗವಾಗಿದೆ.
–ಗೌರವ್ ಗೊಗೊಯ್, ಕಾಂಗ್ರೆಸ್ ಉಪನಾಯಕ
ಪ್ರಧಾನಿ ಮಾರಿಷಸ್‌ಗೆ ಹೋಗಿದ್ದಾರೆ. ಅವರು ಮಣಿಪುರಕ್ಕೂ ಭೇಟಿ ನೀಡಬೇಕು.
–ನೀರಜ್ ಮೌರ್ಯ,  ಸಮಾಜವಾದಿ ಪಕ್ಷದ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.