ADVERTISEMENT

ಲೋಕಸಭೆ ಚುನಾವಣೆಗೂ ಮುನ್ನ ಮಹಿಳೆಯರನ್ನು ಮೂರ್ಖರನ್ನಾಗಿಸುವ ಮಸೂದೆ: ಅತಿಶಿ

ಪಿಟಿಐ
Published 19 ಸೆಪ್ಟೆಂಬರ್ 2023, 12:27 IST
Last Updated 19 ಸೆಪ್ಟೆಂಬರ್ 2023, 12:27 IST
   

ನವದೆಹಲಿ: ಇದು ಮಹಿಳಾ ಮೀಸಲಾತಿ ಮಸೂದೆಯಲ್ಲ, 2024ರ ಲೋಕಸಭೆ ಚುನಾವಣೆಗೂ ಮುನ್ನ ಮಹಿಳೆಯರನ್ನು ಮೂರ್ಖರನ್ನಾಗಿಸುವ ಮಸೂದೆ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕಿ ಅತಿಶಿ ಟೀಕಿಸಿದ್ದಾರೆ.

‘ನಾರಿ ಶಕ್ತಿ ವಂದನಾ ಅಧಿನಿಯಮ’ ಎಂಬ ಹೆಸರಿನಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ಮಂಡಿಸಿದೆ.

ಮಸೂದೆ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅತಿಶಿ, ಮಹಿಳೆಯರ ಯೋಗಕ್ಷೇಮ ಮತ್ತು ಮಹಿಳೆಯರ ಕಲ್ಯಾಣದ ಬಗ್ಗೆ ಬಿಜೆಪಿಗೆ ಆಸಕ್ತಿ ಇಲ್ಲ. ಮಸೂದೆಯ ನಿಬಂಧನೆಗಳನ್ನು ಸೂಕ್ಷ್ಮವಾಗಿ ಓದಿದರೆ ಅದು 'ಮಹಿಳಾ ಬೇವಕೂಫ್ ಬನಾವೊ' ಮಸೂದೆ ಎಂದು ತೋರುತ್ತಿದೆ’ ಎಂದು ಅವರು ಟೀಕಿಸಿದರು.

ADVERTISEMENT

ಮಸೂದೆ ಪ್ರಕಾರ, ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮುಗಿಸಿದ ಬಳಿಕ ಮಸೂದೆ ಜಾರಿಗೆ ಬರಲಿದೆ. ಅದಾದ ಬಳಿಕ, 15 ವರ್ಷಗಳವರೆಗೆ ಜಾರಿಯಲ್ಲಿರಲಿದೆ. ಪ್ರತಿ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯಲ್ಲೂ ಮಹಿಳೆಯರಿಗೆ ಮೀಸಲಾದ ಕ್ಷೇತ್ರಗಳು ಬದಲಾಗುತ್ತವೆ. ಮಹಿಳಾ ಮೀಸಲಾತಿ ಮಸೂದೆಯಲ್ಲಿ ಕ್ಷೇತ್ರ ಮರು ವಿಂಗಡಣೆ ಮತ್ತು ಜನಗಣತಿ ನಿಬಂಧನೆಗಳನ್ನು ಸೇರಿಸಿದ್ದೇಕೆ? ಇದರರ್ಥ ಮುಂಬರುವ 2024ರ ಲೋಕಸಭಾ ಚುನಾವಣೆಗೂ ಮುನ್ನ ಈ ಮಸೂದೆ ಜಾರಿಯಾಗುವುದಿಲ್ಲ ಎಂದು ದೆಹಲಿ ಸಚಿವೆ ಅತಿಶಿ ಹೇಳಿದ್ದಾರೆ.

‘ಕ್ಷೇತ್ರ ಮರು ವಿಂಗಡಣೆ ಮತ್ತು ಗಣತಿ ನಿಬಂಧನೆಗಳನ್ನು ತೆಗೆದು 2024ರ ಲೋಕಸಭಾ ಚುನಾವಣೆಗೂ ಮುನ್ನವೇ ಮಹಿಳಾ ಮೀಸಲಾತಿ ಮಸೂದೆ ಜಾರಿ ಮಾಡಬೇಕು ನಾವು ಒತ್ತಾಯಿಸುತ್ತೇವೆ’ಎಂದು ಅತಿಶಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.