ಜಗನ್
ಅಮರಾವತಿ: ಇತ್ತೀಚೆಗೆ ಪಲ್ನಾಡು ಜಿಲ್ಲೆಯ ರೆಂಟಪಲ್ಲಾ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಕಾರ್ಯಕರ್ತನೊಬ್ಬ ಮೃತಪಟ್ಟ ಪ್ರಕರಣದಲ್ಲಿ ವೈಎಸ್‌ಆರ್‌ಸಿಪಿ ಮುಖ್ಯಸ್ಥರೂ ಆಗಿರುವ ಮಾಜಿ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧದ ಎಲ್ಲಾ ವಿಚಾರಣೆ ಹಾಗೂ ತನಿಖೆಗೆ ತಡೆ ನೀಡಿ ಆಂಧ್ರ ಪ್ರದೇಶ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಟಿಡಿಪಿ ನಾಯಕರು ಹಾಗೂ ಪೊಲೀಸರ ದೌರ್ಜನ್ಯದಿಂದಾಗಿ ಒಂದು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾದ ಕಾರ್ಯಕರ್ತನ ಮನೆಗೆ ಜೂನ್ 18ರಂದು ರೆಡ್ಡಿ ಭೇಟಿ ನೀಡಿದ್ದರು. ಈ ವೇಳೆ ವೈಎಸ್‌ಆರ್‌ಸಿಪಿ ಬೆಂಬಲಿಗ ಸಿ. ಸಿಂಗಯ್ಯ ಎಂಬುವವರು ಜಗನ್ ಕಾರಿನಡಿಗೆ ಬಿದ್ದು ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು.
ಘಟನೆ ಸಂಬಂಧ ಜಗನ್ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕಾರಿನ ಚಾಲಕನನ್ನು ಎ1 ಹಾಗೂ ಜಗನ್ ಅವರನ್ನು ಎ2 ಅರೋಪಿ ಎಂದು ಹೆಸರಿಸಲಾಗಿತ್ತು.
‘ಪ್ರಕರಣದ ವಿಚಾರಣೆ ಹಾಗೂ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಎರಡು ವಾರಗಳ ಬಳಿಕ ವಿಚಾರಣೆಗೆ ಪಟ್ಟಿ ಮಾಡಿದೆ’ ಎಂದು ಅವರ ಪರ ವಕೀಲರು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಜಗನ್ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಕೂಡದು ಎಂದು ಜುಲೈ 27ರಂದು ಹೈಕೋರ್ಟ್ ಆದೇಶಿಸಿತ್ತಲ್ಲದೇ, ಜುಲೈ 1ಕ್ಕೆ ವಿಚಾರಣೆಯನ್ನು ಮುಂದೂಡಿತ್ತು.
ಪ್ರಕರಣ ಸಂಬಂಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕೆಂದು ಕೋರಿ ಜಗನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಜಗನ್ ರೆಡ್ಡಿಯವರ ಬೆಂಗಾವಲು ವಾಹನದಡಿಗೆ ಬಿದ್ದು ಸಿಂಗಯ್ಯ ಸಾವಿಗೀಡಾಗಿಲ್ಲ ಎಂದು ಪೊಲೀಸರು ಆರಂಭದಲ್ಲಿ ಹೇಳಿದ್ದರು. ಬಳಿಕ ಹೆಚ್ಚಿನ ಸಾಕ್ಷಿಗಳನ್ನು ಪರಿಶೀಲನೆ ನಡೆಸಿದ ಬಳಿಕ ಕಾರಿನಡಿಗೆ ಬಿದ್ದಿದ್ದಾರೆ ಎಂದು ತಿಳಿಸಿದ್ದರು. ಬಳಿಕ ಜಗನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.