ನವದೆಹಲಿ: ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ವೈದ್ಯಕೀಯ ಕಾರಣಗಳನ್ನು ನೀಡಿ ಸೋಮವಾರ(ಜು.21) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ, ನಿಧನ, ಪದಚ್ಯುತಿ ಅಥವಾ ಇನ್ಯಾವುದೇ ಕಾರಣದಿಂದ ಉಪ ರಾಷ್ಟ್ರಪತಿ ಸ್ಥಾನ ತೆರವಾದಲ್ಲಿ, ಆ ಸ್ಥಾನವನ್ನು ಭರ್ತಿ ಮಾಡಲು ಸಾಧ್ಯವಾದಷ್ಟು ಬೇಗ ಚುನಾವಣೆ ನಡೆಸಬೇಕೆಂದು ಸಂವಿಧಾನವು ಹೇಳುತ್ತದೆ.
ಈ ಬಗ್ಗೆ ಸಂವಿಧಾನದ 68ನೇ ವಿಧಿಯ ಕಲಂ 2ರಲ್ಲಿ ವಿವರಿಸಲಾಗಿದೆ.
ಖಾಲಿಯಿರುವ ಹುದ್ದೆಗೆ ಆಯ್ಕೆಯಾದ ವ್ಯಕ್ತಿಯು ತಮ್ಮ ಕಚೇರಿಗೆ ಪ್ರವೇಶಿಸಿದ ದಿನದಿಂದ ಐದು ವರ್ಷಗಳ ಕಾಲ ಅಧಿಕಾರ ಹೊಂದಿರುತ್ತಾರೆ.
ಆದರೆ, ಉಪ ರಾಷ್ಟ್ರಪತಿ ಹುದ್ದೆಯಲ್ಲಿದ್ದವರು ಅವಧಿ ಮುಗಿಯುವ ಮೊದಲು ನಿಧನರಾದರೆ ಅಥವಾ ರಾಜೀನಾಮೆ ನೀಡಿದರೆ ಅಥವಾ ರಾಷ್ಟ್ರಪತಿಯಾಗಿ ಆಯ್ಕೆಯಾದರೆ, ಮುಂದಿನ ಉಪ ರಾಷ್ಟ್ರಪತಿ ಆಯ್ಕೆಯಾಗುವವರೆಗೆ ಅವರ ಕರ್ತವ್ಯಗಳನ್ನು ಯಾರು ನಿರ್ವಹಿಸುತ್ತಾರೆ ಎಂಬ ಬಗ್ಗೆ ಸಂವಿಧಾನದಲ್ಲಿ ವಿವರಿಸಿಲ್ಲ.
ಉಪ ರಾಷ್ಟ್ರಪತಿ ಹುದ್ದೆಯು ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾಗಿದೆ. ಅವರ ಅಧಿಕಾರವಧಿ ಐದು ವರ್ಷಗಳ ಕಾಲ ಇರುತ್ತದೆ. ಅವಧಿ ಮುಗಿದ ನಂತರ ಮುಂದಿನ ಉಪ ರಾಷ್ಟ್ರಪತಿ ಆಯ್ಕೆಯಾಗುವವರೆಗೂ ಅವರು ಅಧಿಕಾರದಲ್ಲಿ ಮುಂದುವರಿಯಬಹುದಾಗಿದೆ.
ಸಂವಿಧಾನದಲ್ಲಿರುವ ಏಕೈಕ ನಿಬಂಧನೆಯು ರಾಜ್ಯಸಭೆಯ ಸಭಾಪತಿಯಾಗಿ ಉಪ ರಾಷ್ಟ್ರಪತಿಯ ಕಾರ್ಯವನ್ನು ವಿವರಿಸುತ್ತದೆ. ಉಪ ರಾಷ್ಟ್ರಪತಿ ರಾಜೀನಾಮೆ ನೀಡಿದ ಸಂದರ್ಭ, ಉಪ ಸಭಾಪತಿ ಅಥವಾ ರಾಷ್ಟ್ರಪತಿಗಳು ಅಧಿಕಾರ ನೀಡಿದ ರಾಜ್ಯಸಭೆಯ ಸದಸ್ಯ ಅವರ ಕಾರ್ಯವನ್ನು ನಿರ್ವಹಿಸುತ್ತಾರೆ.
ಉಪ ರಾಷ್ಟ್ರಪತಿಗಳು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿಗೆ ಸಲ್ಲಿಸುವ ಮೂಲಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಬಹುದು. ರಾಜೀನಾಮೆಯು ಅಂಗೀಕರಿಸಲ್ಪಟ್ಟ ದಿನದಿಂದ ಜಾರಿಗೆ ಬರುತ್ತದೆ.
74 ವರ್ಷದ ಧನಕರ್ ಅವರು 2022ರ ಆಗಸ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅಧಿಕಾರದ ಅವಧಿ 2027ರ ವರೆಗೂ ಇತ್ತು. ರಾಜ್ಯಸಭೆಯ ಸಭಾಪತಿಯೂ ಆಗಿರುವ ಅವರು ಸೋಮವಾರ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಕಲಾಪದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.