ADVERTISEMENT

ಅಧಿಕಾರಕ್ಕೆ ಬರಲು ನನ್ನನ್ನು ಜೈಲಿಗೆ ಕಳುಹಿಸಬೇಕೇ, ಕಳುಹಿಸಿ: ಬಿಜೆಪಿಗೆ ಉದ್ಧವ್

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 16:06 IST
Last Updated 25 ಮಾರ್ಚ್ 2022, 16:06 IST
ಉದ್ಧವ್ ಠಾಕ್ರೆ - ಪಿಟಿಐ ಸಂಗ್ರಹ ಚಿತ್ರ
ಉದ್ಧವ್ ಠಾಕ್ರೆ - ಪಿಟಿಐ ಸಂಗ್ರಹ ಚಿತ್ರ   

ಮುಂಬೈ: ‘ನೀವು ಅಧಿಕಾರಕ್ಕೆ ಬರಲು ನನ್ನನ್ನು ಜೈಲಿಗೆ ಕಳುಹಿಸಬೇಕು ಎಂದುಕೊಂಡಿದ್ದೀರಾ, ಹಾಗಿದ್ದರೆ ಅದನ್ನೇ ಮಾಡಿ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿಗೆ ಸವಾಲೆಸೆದಿದ್ದಾರೆ.

ಕೇಂದ್ರದ ತನಿಖಾ ಸಂಸ್ಥೆಗಳು ‘ಮಹಾ ವಿಕಾಸ್ ಅಘಾಡಿ’ ಸರ್ಕಾರದ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವ ವಿಚಾರವಾಗಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಿವಸೇನಾ ಹಿಂದುತ್ವದ ನಿಲುವಿನಿಂದ ಹಿಂದೆ ಸರಿದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಬಜೆಟ್ ಅಧಿವೇಶನದ ಕೊನೆಯ ದಿನ ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ನೀವು ಅಧಿಕಾರಕ್ಕೆ ಬರಬೇಕು ಎಂದುಕೊಂಡಿದ್ದರೆ ಬನ್ನಿ. ಆದರೆ, ಅಧಿಕಾರಕ್ಕಾಗಿ ಇಷ್ಟೆಲ್ಲಾ ಕೆಟ್ಟ ಕೆಲಸಗಳನ್ನು ಮಾಡಬೇಡಿ. ನಮ್ಮ ಕುಟುಂಬದ ಸದಸ್ಯರ ಮೇಲೆ ದೌರ್ಜನ್ಯ ಎಸಗಬೇಡಿ. ನಿಮ್ಮ ಕುಟುಂದ ಸದಸ್ಯರ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಅಧಿಕಾರಕ್ಕೆ ಬರುವುದಕ್ಕಾಗಿ ನಮ್ಮನ್ನು ಜೈಲಿಗೆ ಕಳುಹಿಸಬೇಕು ಎಂದುಕೊಂಡಿದ್ದರೆ ಹಾಗೆಯೇ ಮಾಡಿ’ ಎಂದು ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಜಾರಿ ನಿರ್ದೇಶನಾಲಯದ (ಇ.ಡಿ) ದಾಳಿ ಬಗ್ಗೆ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಠಾಕ್ರೆ ಅವರ ಪತ್ನಿಯ ತಮ್ಮ ಶ್ರೀಧರ ಪತಂಕರ್‌ ಅವರ ಒಡೆತನದ ಕಂಪನಿಗೆ ಸೇರಿದ ₹6.45 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಬುಧವಾರ ಜಪ್ತಿ ಮಾಡಿತ್ತು.

‘ನವಾಬ್ ಮಲಿಕ್ ರಾಜೀನಾಮೆ ಇಲ್ಲ’

ಹಣ ಅಕ್ರಮ ವರ್ಗಾವಣೆ ‍ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿರುವ ಸಚಿವ ನವಾಬ್ ಮಲಿಕ್ ಅವರ ರಾಜೀನಾಮೆ ಪಡೆಯಬೇಕೆಂಬ ಬಿಜೆಪಿಯ ಆಗ್ರಹವನ್ನು ಅವರು ತಳ್ಳಿಹಾಕಿದ್ದಾರೆ.

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಮತ್ತು ಆತನ ಸಹಚರರ ಚಟುವಟಿಕೆಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನವಾಬ್ ಮಲಿಕ್ ಅವರು ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾರೆ.

‘ತಾಕತ್ತಿದ್ದರೆ ದಾವೂದ್ ಹತ್ಯೆ ಮಾಡಿ’

‘ನೀವು ನವಾಬ್ ಮಲಿಕ್ ರಾಜೀನಾಮೆ ಕೇಳುತ್ತಿದ್ದೀರಿ. ಹಾಗಿದ್ದರೆ ಮೊದಲು ನನ್ನ ಪ್ರಶ್ನೆಗೆ ಉತ್ತರಿಸಿ; ಅಫ್ಜಲ್ ಗುರು ಮತ್ತು ಬುರ್ಹಾನ್ ವಾನಿ ಪರ ಸಹಾನುಭೂತಿ ಹೊಂದಿದ್ದ ಮೆಹಬೂಬಾ ಮುಫ್ತಿಗೆ ಅಂದು ಯಾಕೆ ಬೆಂಬಲ ನೀಡಿದ್ದಿರಿ? ದಾವೂದ್ ಎಲ್ಲಿದ್ದಾನೆ? ಆತ ಎಲ್ಲಿದ್ದಾನೆಂಬುದು ಯಾರಿಗಾದರೂ ತಿಳಿದಿದೆಯೇ? ನೀವು ಕಳೆದ ಚುನಾವಣೆಯಲ್ಲಿ ರಾಮನ ಹೆಸರಿನಲ್ಲಿ ಸ್ಪರ್ಧಿಸಿದಿರಿ. ಈಗ ದಾವೂದ್‌ನ ಹೆಸರಿನಲ್ಲಿ ಮತ ಯಾಚಿಸಲು ಹೊರಟಿದ್ದೀರಾ? ಬರಾಕ್ ಒಬಾಮ (ಅಮೆರಿಕದ ಮಾಜಿ ಅಧ್ಯಕ್ಷ) ಅವರು ಒಸಾಮ ಬಿನ್ ಲಾಡೆನ್ ಹೆಸರಿನಲ್ಲಿ ಮತಯಾಚನೆ ಮಾಡಿದ್ದರೇ? ನಿಮಗೆ ತಾಕತ್ತಿದ್ದರೆ ದಾವೂದ್‌ನನ್ನು ಹತ್ಯೆ ಮಾಡಿ’ ಎಂದು ಬಿಜೆಪಿಗೆ ಠಾಕ್ರೆ ಸವಾಲೆಸೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.