ಗೆಲುವಿನ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
- ಪಿಟಿಐ
ಮುಂಬೈ: ಬಹುಕೋನ ಸ್ಪರ್ಧೆ ಹಾಗೂ ವಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ ಅಘಾಡಿ(ಎಂವಿಎ)ಯ ಅಂಗಪಕ್ಷಗಳಲ್ಲಿನ ಭಿನ್ನಮತ ಹಾಗೂ ಪರಿಣಾಮಕಾರಿ ಯೋಜನೆ ಇಲ್ಲದಿರುವುದೇ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಯಲ್ಲಿ ವಿರೋಧ ಪಕ್ಷಗಳ ಕಳಪೆ ಸಾಧನೆಗೆ ಕಾರಣ ಎನ್ನಲಾಗುತ್ತಿದೆ.
ಎಂವಿಎ ಅಂಗಪಕ್ಷಗಳಾದ ಶಿವಸೇನಾ(ಯುಬಿಟಿ) ಹಾಗೂ ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವಲ್ಲಿಯೂ ವಿಫಲವಾದವು. ಇದು ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ನೆರವಾಯಿತು.
ಈ ಫಲಿತಾಂಶವು ಶಿವಸೇನಾ(ಯುಬಿಟಿ) ಹಾಗೂ ಕಾಂಗ್ರೆಸ್‌ಗಳು ಸಂಘಟನಾತ್ಮಕವಾಗಿ ಎಷ್ಟು ದುರ್ಬಲವಾಗಿ ಎಂಬುದನ್ನು ಬಹಿರಂಗಪಡಿಸಿದೆ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ಎದುರಿಸುವಲ್ಲಿ ಇವು ಹೊಂದಿರುವ ಸಾಮರ್ಥ್ಯ ಕುರಿತು ಹಲವು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಶಿವಸೇನಾ(ಯುಬಿಟಿ) ಹಾಗೂ ಕಾಂಗ್ರೆಸ್ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯ, ಆಂತರಿಕ ಕಚ್ಚಾಟ, ವೈಯಕ್ತಿಕ ಪ್ರತಿಷ್ಠೆಯಿಂದಾಗಿ ನಾಯಕ ನಡುವೆ ನಡೆಯುತ್ತಿದ್ದ ಸಂಘರ್ಷಗಳು, ಸಮನ್ವಯದಿಂದ ಕೂಡಿದ ತಂತ್ರಗಾರಿಕೆಯ ಕೊರತೆಯೇ ಎಂವಿಎ ಸೋಲಿಗೆ ಪ್ರಮುಖ ಕಾರಣಗಳು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಪುಣೆ: ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆ ಕೈಜೋಡಿಸುವ ಮೂಲಕ ಅಜಿತ್ ಪವಾರ್ ಅವರು ‘ಒಗ್ಗಟ್ಟು’ ಪ್ರದರ್ಶಿಸಿ ಹೆಣೆದಿದ್ದ ತಂತ್ರಗಾರಿಕೆ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಪಕ್ಷದ ಪಾರಂಪರಿಕ ಭದ್ರಕೋಟೆಯೆನಿಸಿರುವ ಪುಣೆ ಹಾಗೂ ಪಿಂಪ್ರಿ–ಚಿಂಚವಾಡ್ ಪಾಲಿಕೆಗಳಲ್ಲಿಯೇ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನೆಲಕಚ್ಚಿದೆ. ಚುನಾವಣಾ ಪ್ರಚಾರದ ವೇಳೆ ಅಜಿತ್ ಪವಾರ್ ಅವರು ಬಿಜೆಪಿಯ ಸ್ಥಳೀಯ ನಾಯಕರ ವಿರುದ್ಧ ಟೀಕಾಪ್ರಹಾ ನಡೆಸಿದ್ದರು. ಇದು ಕೂಡ ಪಕ್ಷಕ್ಕೆ ನೆರವಾಗಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.