
ಜೈಪುರ: ಜೈಪುರ ಸಾಹಿತ್ಯ ಉತ್ಸವದ 19ನೇ ಆವೃತ್ತಿಯ ಮೂರನೇ ದಿನ ಮೊದಲ ಅವಧಿಯಲ್ಲೇ ಇಬ್ಬರು ಕನ್ನಡ ಲೇಖಕರು ಪ್ರತ್ಯೇಕ ಗೋಷ್ಠಿಗಳಲ್ಲಿ ಗಮನ ಸೆಳೆದದ್ದು ವಿಶೇಷವಾಗಿತ್ತು. ಸುಧಾಮೂರ್ತಿ ಅವರು ಮಕ್ಕಳಿಗಾಗಿ ತಾವು ಬರೆದ ಕಾದಂಬರಿಯ ಬಗ್ಗೆ ವಿಸ್ತೃತವಾಗಿ ಮಾತನಾಡಿದರೆ, ವಿವೇಕ ಶಾನಭಾಗ ಅವರು ಭಾಷಾಂತರದ ಮಹತ್ವದ ಬಗ್ಗೆ ತಮ್ಮ ಒಳನೋಟಗಳನ್ನು ಪ್ರಸ್ತುತಪಡಿಸಿದರು.
ಲಂಡನ್‌ನಲ್ಲಿರುವ ಮೊಮ್ಮಗಳು ನೂನಿಗೆ ಕಥೆ ಹೇಳುವ ಸಲುವಾಗಿಯೇ ತಾವು ‘ಮ್ಯಾಜಿಕ್ ಆಫ್ ದ ಲಾಸ್ಟ್ ಇಯರ್ ರಿಂಗ್ಸ್’ ಕಾದಂಬರಿ ಬರೆದದ್ದಾಗಿ ಸುಧಾಮೂರ್ತಿ ವಿವರಿಸಿದರು. ಮಕ್ಕಳಿಗೆ ಚರಿತ್ರೆಯನ್ನು ಕಥೆಗಳ ರೂಪದಲ್ಲಿ ತಿಳಿಸಬೇಕು ಎಂದ ಅವರು, ತಮ್ಮ ಅಳಿಯ ರಿಷಿ ಸುನಕ್ ಅವರ ಪೋಷಕರಿಂದ ಪ್ರೇರಣೆಗೊಂಡು ದೇಶ ವಿಭಜನೆಯ ವಸ್ತುವನ್ನು ಕಥಾವಸ್ತುವಾಗಿ ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದರು. ಮಕ್ಕಳಿಗೆ ತಮ್ಮ ನೆಲ, ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ, ಹೆಮ್ಮೆ ಮೂಡುವಂಥ ಕಥೆಗಳನ್ನು ಹೇಳಬೇಕು ಎಂದರು.
ತಮ್ಮ ಕಾದಂಬರಿಗಳಲ್ಲಿ ಮೂರನೇ ಒಂದು ಭಾಗದಷ್ಟು ವಾಸ್ತವಾಂಶಗಳು ಇರುತ್ತವೆ ಎಂದ ಅವರು, ‘ಅದಕ್ಕಾಗಿ ಓಡಾಟ, ಸಂಶೋಧನೆ ಮಾಡುತ್ತೇನೆ. ಆದರೆ, ಕಾದಂಬರಿಯಲ್ಲಿ ಯಾವುದು ವಾಸ್ತವ, ಯಾವುದು ಕಲ್ಪನೆ ಎನ್ನುವುದು ಓದುಗರಿಗೆ ತಿಳಿಯದಂತೆ ಬರವಣಿಗೆ ಇರಬೇಕು’ ಎಂದು ಹೇಳಿದರು.
‘ಆರಂಭದಲ್ಲಿ ಕನ್ನಡದಲ್ಲಿ ಬರವಣಿಗೆ ಆರಂಭಿಸಿದರೂ, ನಂತರ ಟಿಜೆಎಸ್ ಜಾರ್ಜ್ ಅವರ ಸಲಹೆಯಂತೆ ಇಂಗ್ಲಿಷ್‌ನಲ್ಲಿ ಬರೆಯಲು ಆರಂಭಿಸಿದೆ. ಇಂದು ನೂರು ರೂಪಾಯಿ ನೋಟಿನ ಮೇಲೆ ಎಷ್ಟು ಭಾಷೆಗಳಿವೆಯೋ, ಅಷ್ಟೂ ಭಾಷೆಗಳಿಗೆ ನನ್ನ ಕೃತಿಗಳು ತರ್ಜುಮೆಗೊಂಡಿವೆ’ ಎಂದರು. ತಾವು 50 ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ 25 ಮಕ್ಕಳ ಪುಸ್ತಕಗಳು ಎಂದು ಹೇಳಿದರು.
ಅನುವಾದದ ಸಾಧ್ಯತೆ ಮತ್ತು ಸವಾಲು: ‘ಹೈಪನೇಟೆಡ್ ವರ್ಲ್ಡ್ಸ್ʼ ಗೋಷ್ಠಿಯಲ್ಲಿ ವಿವೇಕ ಶಾನಭಾಗ ಅವರೊಂದಿಗೆ ಅನುವಾದಕರಾದ ರೀಟಾ ಕೊಠಾರಿ ಮತ್ತು ಅರುಣವ ಸಿನ್ಹಾ ಭಾಗವಹಿಸಿದ್ದರು.
‘ಕಳೆದ ನಾಲ್ಕು ವರ್ಷಗಳಲ್ಲಿ ಎರಡು ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿಗಳನ್ನು ಪಡೆದಿದ್ದು, ಜಗತ್ತಿನಲ್ಲಿ ಎರಡು ಪ್ರಶಸ್ತಿ ಪಡೆದ ಏಕೈಕ ರಾಷ್ಟ್ರ ನಮ್ಮದಾಗಿದೆ. ದೇಶದಲ್ಲಿ ಭಾಷಾಂತರ ಕ್ಷೇತ್ರವು ಪ್ರವರ್ಧಮಾನಕ್ಕೆ ಬರುತ್ತಿದೆ. ಆದರೆ, ತರ್ಜುಮೆಯಲ್ಲಿನ ತೊಡಕುಗಳ ಬಗ್ಗೆ ಮತ್ತು ಭಾಷಾ ರಾಜಕಾರಣದ ಬಗ್ಗೆ ಮತ್ತಷ್ಟು ಗಮನ ನೀಡಬೇಕಿದೆ’ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಭಾರತೀಯ ಭಾಷೆಗಳನ್ನು ಜೊತೆಯಾಗಿಸುವ ಸುಸಂಬದ್ಧ ನಿರೂಪಣೆ ಅಥವಾ ಚೌಕಟ್ಟಿನ ಅಗತ್ಯವಿದೆ. ಪ್ರಕಾಶಕರಲ್ಲಿ ವ್ಯವಸ್ಥಿತ ಕಾರ್ಯತಂತ್ರದ ಗೈರು, ಕಾಲಮಿತಿ, ಮಾರುಕಟ್ಟೆ ಆಧಾರಿತ ತೀರ್ಮಾನಗಳಂಥ ಸವಾಲುಗಳಿವೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಅಂತರಭಾಷಾ ಸಂವಾದಗಳು, ಸಾಂಸ್ಕೃತಿಕ ಕೊಡುಕೊಳ್ಳುವಿಕೆ, ನಿರ್ದಿಷ್ಟ ಭಾಷೆ, ಪ್ರದೇಶದ ರಾಜಕೀಯಕ್ಕೆ ಹೊರತಾದ ವಿನಿಮಯ ಹೆಚ್ಚಾಗಬೇಕು ಎಂದು ಸಂವಾದದಲ್ಲಿ ಭಾಗವಹಿಸಿದ್ದವರು ಅಭಿಪ್ರಾಯಪಟ್ಟರು.
ಗಾಂಧಿ, ಜಿನ್ನಾ, ಸಾವರ್ಕರ್: ಮಹಾತ್ಮ ಗಾಂಧಿ, ಮುಹಮ್ಮದ್ ಅಲಿ ಜಿನ್ನಾ ಮತ್ತು ಸಾವರ್ಕರ್ ಕುರಿತ ಗೋಷ್ಠಿಯಲ್ಲಿ ಲೇಖಕರಾದ ಮಾರ್ಕಂಡ್ ಪರಾಂಜಪೆ, ಅಲೆಕ್ಸ್ ವಾನ್ ಟುಂಜೆಲ್ಮನ್, ಕಿಶ್ವರ್ ದೇಸಾಯಿ ಭಾಗವಹಿಸಿದ್ದರು.
ಗಾಂಧಿ, ಜಿನ್ನಾ ಇಬ್ಬರೂ ಗುಜರಾತ್‌ನವರು. ಇಬ್ಬರೂ ವಕೀಲರು. ಇಬ್ಬರೂ ಕಾನೂನು ಓದಲು ಲಂಡನ್‌ಗೆ ಹೋಗಿದ್ದರು. ಗಾಂಧಿ ಧಾರ್ಮಿಕ ಮನೋಭಾವದವರಾಗಿದ್ದರು. ಗಾಂಧಿ, ಜಿನ್ನಾ, ಸಾವರ್ಕರ್ ಮೂವರೂ ಒಂದೇ ಸಮಯದಲ್ಲಿ ಲಂಡನ್‌ನಲ್ಲಿದ್ದರು. ನಾಸ್ತಿಕರಾಗಿದ್ದ ಸಾವರ್ಕರ್ ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಜಿನ್ನಾ ಅವರನ್ನು ಹಿಂದೂ, ಮುಸ್ಲಿಂ ಏಕತೆಯ ಸಂಕೇತ ಎನ್ನುವಂತೆ ಕಾಣಲಾಗುತ್ತಿತ್ತು. ಆದರೆ, ಮುಂದೆ ಸಾವರ್ಕರ್ ಮತ್ತು ಜಿನ್ನಾ ಭಿನ್ನ ಹಾದಿ ತುಳಿದರು ಎನ್ನುವ ವಿಶ್ಲೇಷಣೆ ಸಂವಾದದಲ್ಲಿ ಕೇಳಿಬಂತು.
ದೊಡ್ಡ ಪ್ರಕಾಶನ ಸಂಸ್ಥೆಗಳ ಭವಿಷ್ಯ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶಕ ಅನಂತ ಪದ್ಮನಾಭನ್ ಅತಿ ಹೆಚ್ಚು ಪುಸ್ತಕಗಳು ಮಾರಾಟವಾಗುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದರು. ಎಐನಂಥ ತಂತ್ರಜ್ಞಾನಗಳಿಂದ ಪುಸ್ತಕೋದ್ಯಮಕ್ಕೆ ಹಲವು ಅನುಕೂಲಗಳಿವೆ. ಜನರ ಆಸಕ್ತಿ ಅಭಿರುಚಿ ಅರಿಯಬಹುದು ಮಾರುಕಟ್ಟೆಗೂ ಬಳಸಬಹುದು. ಅದರಿಂದ ಕೆಲವು ಅನನುಕೂಲಗಳು ಇವೆ. ಆದರೆ ಪುಸ್ತಕೋದ್ಯಮವೇ ಕಾಲಕಾಲಕ್ಕೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಲೇ ಮುಂದೆ ಸಾಗುತ್ತಿದೆ. ಈಗಲೂ 10 ಪುಸ್ತಕಗಳ ಪೈಕಿ ಐದು ಪುಸ್ತಕಗಳನ್ನು ಓದುಗರು ಅಂಗಡಿಗಳಿಂದಲೇ ಕೊಳ್ಳುತ್ತಿದ್ದು ಭವಿಷ್ಯದಲ್ಲಿಯೂ ಪುಸ್ತಕ ಅಂಗಡಿಗಳು ಇರುತ್ತವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.