ADVERTISEMENT

RSS ಸರ್ವಾಧಿಕಾರಿ ದೃಷ್ಟಿಕೋನ ಹೊಂದಿರುವ ಮತೀಯವಾದಿ ಸಂಸ್ಥೆ: ಜೈರಾಮ್‌ ರಮೇಶ್‌

ಪಿಟಿಐ
Published 2 ಅಕ್ಟೋಬರ್ 2025, 14:41 IST
Last Updated 2 ಅಕ್ಟೋಬರ್ 2025, 14:41 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ: ‘ಆರ್‌ಎಸ್‌ಎಸ್‌ ಸರ್ವಾಧಿಕಾರಿ ದೃಷ್ಟಿಕೋನ ಹೊಂದಿರುವ ಮತೀಯವಾದಿ ಸಂಸ್ಥೆಯಾಗಿದೆ ಎಂದು ಮಹಾತ್ಮ ಗಾಂಧಿ ಬಣ್ಣಿಸಿದ್ದರು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ವಾಗ್ದಾಳಿ ನಡೆಸಿದ್ದಾರೆ.

ಆರ್‌ಎಸ್‌ಎಸ್‌ನ 100ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ‘ಎಕ್ಸ್‌’ನಲ್ಲಿ ಸಂಘವನ್ನು ಕಟುವಾಗಿ ಟೀಕಿಸಿರುವ ಅವರು ಪುಸ್ತಕವೊಂದರ ಆಯ್ದ ಭಾಗಗಳನ್ನು ಉಲ್ಲೇಖಿಸಿದ್ದಾರೆ.

ಗಾಂಧೀಜಿ ಅವರ ಅಪ್ತ ಸಹಾಯಕರಲ್ಲಿ ಒಬ್ಬರಾದ ಪ್ಯಾರೆಲಾಲ್‌ ಅವರು 1956ರಲ್ಲಿ ‘ಮಹಾತ್ಮ ಗಾಂಧಿ: ದಿ ಲಾಸ್ಟ್‌ ಫೇಸ್‌’ ಪುಸ್ತಕದ ಮೊದಲ ಸಂಪುಟವನ್ನು 1956ರಲ್ಲಿ ಪ್ರಕಟಿಸಿದ್ದರು. ಎರಡು ವರ್ಷಗಳ ಬಳಿಕ ಅದರ ಎರಡನೇ ಸಂಪುಟ ಪ್ರಕಟವಾಯಿತು. ಎರಡನೇ ಸಂಪುಟದ 440ನೇ ಪುಟದಲ್ಲಿ ಮಹಾತ್ಮ ಗಾಂಧಿ ಅವರು ಸಹೋದ್ಯೋಗಿಗಳ ಜತೆ ನಡೆಸಿದ ಸಂಭಾಷಣೆಯ (1947ರ ಸೆಪ್ಟೆಂಬರ್‌ 12) ಬಗ್ಗೆ ಬರೆದಿದ್ದಾರೆ. ಅದರಲ್ಲಿ ರಾಷ್ಟ್ರಪಿತ ಗಾಂಧೀಜಿ ಅವರು ಆರ್‌ಎಸ್‌ಎಸ್‌ ಅನ್ನು ಸರ್ವಾಧಿಕಾರಿ ದೃಷ್ಟಿಕೋನ ಹೊಂದಿರುವ ಮತೀಯವಾದಿ ಸಂಸ್ಥೆ ಎಂದು ಹೇಳಿದ್ದರು ಎಂಬುದಾಗಿ ವರ್ಣಿಸಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಆ ಪುಟದ ‘ಸ್ಕ್ರೀನ್‌ಶಾಟ್‌’ ಅನ್ನು ಅವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ. ಐದು ತಿಂಗಳ ನಂತರ ಆಗಿನ ಕೇಂದ್ರ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ಆರ್‌ಎಸ್‌ಎಸ್‌ ಅನ್ನು ನಿಷೇಧಿಸಿದ್ದರು ಎಂದು ಅವರು ಹೇಳಿದ್ದಾರೆ. 

  ‘1948ರ ಡಿಸೆಂಬರ್‌ 16ರಂದು ಜೈಪುರದಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ ಪಟೇಲ್‌ ಅವರು ರಾಷ್ಟ್ರಧ್ವಜವನ್ನು ಬದಲಿಸಲು ಬಯಸುವ ಸಂಘಟನೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು’ ಎಂಬುದಾಗಿ ರಮೇಶ್‌ ತಿಳಿಸಿದ್ದಾರೆ. ಈ ಕುರಿತು ಪ್ರಕಟವಾಗಿದ್ದ ಪಟೇಲ್‌ ಅವರ ಭಾಷಣದ ವರದಿಯ ‘ಸ್ಕ್ರೀನ್‌ಶಾಟ್‌’ ಅನ್ನೂ ಅವರು ಹಂಚಿಕೊಂಡಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.