ADVERTISEMENT

ಕೇರಳ: ಉನ್ನತ ಶಿಕ್ಷಣ ಸಚಿವರ ರಾಜೀನಾಮೆ ಸದ್ಯಕ್ಕಿಲ್ಲ

ಸಂಬಂಧಿ ನೇಮಕ ವಿವಾದ.

ಪಿಟಿಐ
Published 10 ಏಪ್ರಿಲ್ 2021, 11:32 IST
Last Updated 10 ಏಪ್ರಿಲ್ 2021, 11:32 IST
ಕೇರಳದ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಅವರ ರಾಜೀನಾಮೆಗೆ ಆಗ್ರಹಪಡಿಸಿ ಪ್ರತಿಭಟಿಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಯತ್ನಿಸುತ್ತಿರುವುದು (ಸಂಗ್ರಹ ಚಿತ್ರ)
ಕೇರಳದ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಅವರ ರಾಜೀನಾಮೆಗೆ ಆಗ್ರಹಪಡಿಸಿ ಪ್ರತಿಭಟಿಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಯತ್ನಿಸುತ್ತಿರುವುದು (ಸಂಗ್ರಹ ಚಿತ್ರ)   

ತಿರುವನಂತಪುರ: ‘ಸಂಬಂಧಿಗೆ ಉದ್ಯೋಗವನ್ನು ಕೊಡಿಸಲು ಸಚಿವ ಸ್ಥಾನದ ಪ್ರಭಾವ ಬಳಸಿರುವ ಬಗ್ಗೆ ಲೋಕಾಯುಕ್ತರಿಂದ ಪ್ರತಿಕೂಲ ವರದಿ ಇದ್ದರೂ, ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಅವರು ತಕ್ಷಣಕ್ಕೆ ರಾಜೀನಾಮೆ ಕೊಡುವುದಿಲ್ಲ’ ಎಂದು ಕಾನೂನು ಸಚಿವ ಎ.ಕೆ.ಬಾಲನ್‌ ಅವರು ತಿಳಿಸಿದ್ದಾರೆ.

‘ಜಲೀಲ್ ಅವರಿಗೆ ವಿವಿಧ ಕಾನೂನು ಆಯ್ಕೆಗಳಿವೆ. ಲೋಕಾಯುಕ್ತ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತರಬಹುದು. ಅಲ್ಲದೆ, ಲೋಕಾಯುಕ್ತ ವರದಿ ಆಧರಿಸಿ ಕ್ರಮಕೈಗೊಳ್ಳಲು ಮುಖ್ಯಮಂತ್ರಿಗೆ ಮೂರು ತಿಂಗಳ ಅವಕಾಶವಿದೆ‘ ಎಂದು ಅವರು ಶನಿವಾರ ಹೇಳಿದರು.

ಲೋಕಾಯುಕ್ತ ಅವರ ವರದಿ ಹಿನ್ನೆಲೆಯಲ್ಲಿ ಜಲೀಲ್‌ ಅವರು ತಕ್ಷಣವೇ ರಾಜೀನಾಮೆ ಕೊಡಬೇಕು ಎಂದು ಈಗ ಒತ್ತಾಯಿಸುತ್ತಿರುವರು, ರಾಜ್ಯದಲ್ಲಿ ಅಂತಹ ಯಾವುದೇ ನಿದರ್ಶನವಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಕೆಳಹಂತದ ಕೋರ್ಟ್ ಅಭಿಪ್ರಾಯ ಆಧರಿಸಿ ಯಾರಾದರೂ ರಾಜೀನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.

ADVERTISEMENT

ಜಲೀಲ್‌ ಅವರ ಸಂಬಂಧಿ ಕೆ.ಟಿ.ಅದೀಬ್‌ ಅವರು ಅನುಕಂಪದ ಆಧಾರದಲ್ಲಿ ನೇಮಕವಾಗಿದ್ದಾರೆ. ಅವರು ಅರ್ಹರಿದ್ದರೆ, ಇಲ್ಲವೇ ಎಂಬುದನ್ನಷ್ಟೇ ಪರಿಶೀಲಿಸಬೇಕು. ಸಂಬಂಧಿಗಳು ನೇಮಕವಾಗಬಾರದು ಎಂದು ಯಾವುದೇ ಕಾಯ್ದೆಯೂ ಹೇಳಿಲ್ಲ ಎಂದು ಬಾಲನ್‌ ಅವರು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.