ADVERTISEMENT

ಚುನಾಯಿತ ಸರ್ಕಾರವಿಲ್ಲದೆ 5 ವರ್ಷ ಪೂರ್ಣಗೊಳಿಸಿದ ಜಮ್ಮು ಮತ್ತು ಕಾಶ್ಮೀರ

ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸುವಂತೆ ಒತ್ತಾಯ

ಪಿಟಿಐ
Published 19 ಜೂನ್ 2023, 11:32 IST
Last Updated 19 ಜೂನ್ 2023, 11:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಚುನಾಯಿತ ಸರ್ಕಾರವಿಲ್ಲದೆ ಇಂದಿಗೆ ಐದು ವರ್ಷ ಪೂರ್ಣಗೊಂಡಿದೆ. ಕಣಿವೆಯಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಪ್ರಮುಖ ರಾಜಕೀಯ ಪಕ್ಷಗಳು ಕಿಡಿಕಾರಿವೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು 2019ರ ಆಗಸ್ಟ್‌ 5ರಂದು ರದ್ದುಪಡಿಸಿದ್ದ ಕೇಂದ್ರ ಸರ್ಕಾರ, ರಾಜ್ಯವನ್ನು 'ಜಮ್ಮು ಮತ್ತು ಕಾಶ್ಮೀರ' ಹಾಗೂ 'ಲಡಾಖ್‌' ಎಂದು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ.

ರಾಜ್ಯ ವಿಭಜನೆಗೂ ಮುನ್ನ ಇಲ್ಲಿ ಪಿಡಿಪಿ–ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. ಆದರೆ, ಬಿಜೆಪಿಯು 2018ರ ಜೂನ್ 19ರಂದು ಬೆಂಬಲ ಹಿಂಪಡೆಯುವುದರೊಂದಿಗೆ ಸರ್ಕಾರ ಪತನಗೊಂಡಿತ್ತು. ಮುಖ್ಯಮಂತ್ರಿ ಸ್ಥಾನಕ್ಕೆ ಮುಫ್ತಿ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಯಾವುದೇ ಚುನಾಯಿತ ಸರ್ಕಾರ ರಚನೆಯಾಗಿಲ್ಲ.

ADVERTISEMENT

ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ, ದೇಶದ ಪ್ರಜಾಪ್ರಭುತ್ವದ ಪತನವು ಜಮ್ಮು ಮತ್ತು ಕಾಶ್ಮೀರದಿಂದ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.

''ಪ್ರಜಾಪ್ರಭುತ್ವವು ನಮ್ಮ ನರನಾಡಿಗಳಲ್ಲಿದೆ, ನಮ್ಮ ಸಂಸ್ಕೃತಿಯಲ್ಲಿದೆ', 'ಭಾರತವು ಪ್ರಜಾಪ್ರಭುತ್ವದ ತಾಯಿ', 'ಭಾರತ ಪ್ರಜಾಪ್ರಭುತ್ವದ ದೇವಾಲಯ'. ಇಂತಹ ಶ್ರೇಷ್ಠ ಮಾತುಗಳನ್ನು ಅಂತರರಾಷ್ಟ್ರೀಯ ಸಮುದಾಯದೆದುರು ಮತ್ತೆ ಮತ್ತೆ ಸಾರಲಾಗುತ್ತದೆ. ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರ, ಕೇಂದ್ರ ಸರ್ಕಾರದ ಆಳ್ವಿಕೆಯಲ್ಲಿ ಇಂದಿಗೆ ಐದು ವರ್ಷ ಪೂರ್ಣಗೊಳಿಸಿದೆ. ಪ್ರಜಾಪ್ರಭುತ್ವದ ಅಂತ್ಯ ಜಮ್ಮು ಮತ್ತು ಕಾಶ್ಮೀರಲ್ಲಿ ಆರಂಭವಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ವಕ್ತಾರ ಮೋಹಿತ್‌ ಭಾನ್‌, ಇಡೀ ದೇಶ ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. ಅವರು, ''ಪ್ರಜಾಪ್ರಭುತ್ವದ ತಾಯಿ' ಎಂದು ಕರೆದುಕೊಳ್ಳುವುದಕ್ಕೆ ಇಡೀ ದೇಶ ಮತ್ತು ಅದರ ನಾಯಕತ್ವವು ನಾಚಿಕೆಯಿಂದ ತಲೆ ತಗ್ಗಿಸಬೇಕು. ಕೇಂದ್ರದ ಅಚ್ಚರಿಯ 5 ವರ್ಷಗಳ ಆಳ್ವಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರವು ಕುಗ್ಗಿಹೋಗಿದೆ. ಜನರ ಹಕ್ಕುಗಳು ಮತ್ತು ಪ್ರಾತಿನಿಧ್ಯವನ್ನು ಘೋರವಾಗಿ ನಿರ್ಲಕ್ಷಿಸಲಾಗಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸಬೇಕು ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸುತ್ತಿವೆ. ಇಲ್ಲಿ 2014ರಲ್ಲಿ ಕಳೆದ ಬಾರಿ ವಿಧಾನಸಭೆ ಚುನಾವಣೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.