ADVERTISEMENT

ಭಾರಿ ಮಳೆ: ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

ಕಣಿವೆ ಮಾರ್ಗದಲ್ಲಿ ಮಣ್ಣು ಕುಸಿತ: ಅಮರನಾಥ ಯಾತ್ರಿಗಳಿಗೆ ತೊಂದರೆ

ಪಿಟಿಐ
Published 23 ಜುಲೈ 2025, 13:29 IST
Last Updated 23 ಜುಲೈ 2025, 13:29 IST
ಸಂಗ್ರಹ ಚಿತ್ರ 
ಸಂಗ್ರಹ ಚಿತ್ರ    

ಜಮ್ಮು: ಧಾರಾಕಾರ ಮಳೆಯಿಂದಾಗಿ ಮಣ್ಣು ಕುಸಿದು  ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಅಪಾರ ಸಂಖ್ಯೆಯ ವಾಹನಗಳು, ಅಮರನಾಥ ಯಾತ್ರಿಗಳು ರಂಬನ್‌ ಜಿಲ್ಲೆಯಲ್ಲಿ ಹೆದ್ದಾರಿಯಲ್ಲಿ ದಟ್ಟಣೆಯಲ್ಲಿ ಸಿಲುಕಿದ್ದಾರೆ.   

‘ಜಮ್ಮು ವಲಯದಲ್ಲಿ ಮೂರು ದಿನಗಳಿಂದ ಮಳೆ ಮುಂದುವರಿದಿದೆ. ಈ ಮಧ್ಯೆ, ಮುಂದಿನ 24 ಗಂಟೆಗಳಲ್ಲಿ ದಿಢೀರ್‌ ಪ್ರವಾಹ ಉಂಟಾಗುವ ಮುನ್ನೆಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಹೀಗಾಗಿ, ಮಾರ್ಗ ಮಧ್ಯೆ ಸಿಲುಕಿರುವ ಅಮರನಾಥ ಯಾತ್ರಿಗಳನ್ನು ವಾಪಸ್‌ ಶ್ರೀನಗರಕ್ಕೆ ಕರೆತರಲು ಜಿಲ್ಲಾಡಳಿತ ಕಾರ್ಯಾಚರಣೆ ಆರಂಭಿಸಿದೆ.

ಮಳೆ ಕಡಿಮೆಯಾಗಿ, ಸಂಚಾರ ಪುನರಾರಂಭಗೊಂಡ ನಂತರವೇ, ಈ ಮಾರ್ಗ ಬಳಸುವಂತೆ ಜನರಿಗೆ ಜಿಲ್ಲಾಡಳಿತ ಮನವಿ ಮಾಡಿದೆ.

ADVERTISEMENT

‘ರಂಬನ್‌ ಜಿಲ್ಲೆಯ ಮಗರ್‌ಕೋಟೆ ಕಣಿವೆಯಲ್ಲಿನ ಸೇತುವೆ ಬಳಿ ಮಣ್ಣು ಕುಸಿದಿದೆ. ದೇಶದ ಉಳಿದ ಭಾಗಗಳಿಂದ ಕಾಶ್ಮೀರವನ್ನು ಸಂಪರ್ಕಿಸುವ ಏಕೈಕ ಹೆದ್ದಾರಿ ಇದಾಗಿದ್ದು, ಸಂಚಾರ ಸ್ಥಗಿತಗೊಂಡಿರುವುದರಿಂದ ಜನರು ಪರದಾಡುವಂತಾಗಿದೆ.

‘ಮಳೆ ಮುಂದುವರಿದಿರುವುದು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹವಾಮಾನ ಪೂರಕವಾಗಿದ್ದರೆ ಮುಂದಿನ ಕೆಲವು ಗಂಟೆಗಳಲ್ಲಿ ಹೆದ್ದಾರಿಯಲ್ಲಿ ಸಂಚಾರ ಪುನರಾರಂಭಗೊಳ್ಳುವ ಸಾಧ್ಯತೆ ಇದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

ಕಿಶ್ತವಾಡ್‌ ಜಿಲ್ಲೆಯ ಸಿಂಥನ್‌ನಲ್ಲ ಮಾರ್ಗದಲ್ಲೂ ಪ್ರವಾಹದಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಜೌರಿ, ಪೂಂಚ್‌, ರಿಯಾಸಿ, ಉಧಂಪುರ್‌, ಥೋಡ ಸೇರಿದಂತೆ ಕಣಿವೆ, ಪರ್ತವ ಶ್ರೇಣಿಯ ಮಾರ್ಗಗಳಲ್ಲಿ ಅಲ್ಲಲ್ಲಿ ಮಣ್ಣು ಕುಸಿದಿದೆ. 

‘ಮಳೆ ಮತ್ತು ಪ್ರವಾಹ ಸಂಬಂಧಿತ ಅನಾಹುತಗಳಿಗೆ ತುರ್ತಾಗಿ ಸ್ಪಂದಿಸಲು ಜಿಲ್ಲಾ ಕೇಂದ್ರಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ವಿಪತ್ತು ನಿರ್ವಹಣಾ ತಂಡಗಳನ್ನು ಸನ್ನದ್ಧವಾಗಿಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.