ADVERTISEMENT

2026ರ TN ಚುನಾವಣೆ: TVK ವೇದಿಕೆಯಲ್ಲಿ ವಿಜಯ್ ಜತೆಗೂಡಿದ ಪ್ರಶಾಂತ್ ಕಿಶೋರ್‌

ಏಜೆನ್ಸೀಸ್
Published 26 ಫೆಬ್ರುವರಿ 2025, 9:33 IST
Last Updated 26 ಫೆಬ್ರುವರಿ 2025, 9:33 IST
<div class="paragraphs"><p>ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ವೇದಿಕೆಯಿಂದ ಜನರತ್ತ ಕೈಬೀಸಿದ ಪಕ್ಷದ ಮುಖ್ಯಸ್ಥ ವಿಜಯ್ ಹಾಗೂ ಪ್ರಶಾಂತ್ ಕಿಶೋರ್</p></div>

ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ವೇದಿಕೆಯಿಂದ ಜನರತ್ತ ಕೈಬೀಸಿದ ಪಕ್ಷದ ಮುಖ್ಯಸ್ಥ ವಿಜಯ್ ಹಾಗೂ ಪ್ರಶಾಂತ್ ಕಿಶೋರ್

   

ಪಿಟಿಐ ಚಿತ್ರ

ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಎಂಬ ಪಕ್ಷ ಹುಟ್ಟುಹಾಕಿರುವ ನಟ ವಿಜಯ್‌ ಅವರು ತಮ್ಮ ಪಕ್ಷದ ಮೊದಲ ವಾರ್ಷಿಕೋತ್ಸವವನ್ನು ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಸಿದ್ದಾರೆ. 2026ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಎಂದೇ ಕರೆಯಲಾಗುತ್ತಿರುವ ಈ ವೇದಿಕೆಯಲ್ಲಿ ವಿಜಯ್‌ ಜೊತೆ ಚುನಾವಣಾ ನಿಪುಣ ಪ್ರಶಾಂತ್ ಕಿಶೋರ್ ಕಾಣಿಸಿಕೊಂಡಿರುವುದು ತೀವ್ರ ಚರ್ಚೆ ಹುಟ್ಟುಹಾಕಿದೆ.

ADVERTISEMENT

ದೇಶದಲ್ಲಿ ಈವರೆಗೂ ನಡೆದ ಹಲವು ಚುನಾವಣೆಗಳಲ್ಲಿ ಫಲಿತಾಂಶ ಬದಲಾವಣೆಯಲ್ಲಿ ಪ್ರಶಾಂತ್ ಕಿಶೋರ್ ಪಾತ್ರ ಮಹತ್ವ ಪಡೆದುಕೊಂಡಿದೆ. ಚುನಾವಣೆ ಗೆಲುವಿಗೆ ಅಗತ್ಯವಿರುವ ಮಾದರಿಯಲ್ಲಿ ಪ್ರಚಾರ ಸಿದ್ಧತೆ ಮಾಡುವ ಅವರ ಸೂತ್ರವನ್ನು ಟಿವಿಕೆ ಪಕ್ಷವೂ ಅಳವಡಿಸಿಕೊಳ್ಳಲಿದೆಯೇ? ಯೋಜನಾಬದ್ಧ ಮತ್ತು ಚುನಾವಣಾ ಮಾಹಿತಿಗಳನ್ನು ಆಧರಿಸಿ ಚುನಾವಣೆಗೆ ಅಣಿಯಾಗಲು ಪಕ್ಷಕ್ಕೆ ಪ್ರಶಾಂತ್ ಕಿಶೋರ್ ನೆರವಾಗಲಿದ್ದಾರೆಯೇ ಎಂಬ ಚರ್ಚೆಗಳು ನಡೆದಿವೆ.

ಇದರ ಬೆನ್ನಲ್ಲೇ, ವಿಜಯ್ ಸಹಿ ಹಾಕಿರುವ #GetOut ಫಲಕಗಳು ಸಾಕಷ್ಟು ಸದ್ದು ಮಾಡುತ್ತಿವೆ. ಬಿಜೆಪಿ ಮತ್ತು ಡಿಎಂಕೆಯನ್ನು ಗುರಿಯಾಗಿಸಿ #GetOutModi ಹಾಗೂ #GetOutStalin ಎಂಬ ಫಲಕಗಳು ಎಲ್ಲೆಡೆ ಪ್ರದರ್ಶನ ಕಂಡವು. ಈ ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು ತಮಿಳುನಾಡಿಗೆ ಅನ್ಯಾಯ ಮಾಡುತ್ತಿವೆ ಎಂದು ಪರೋಕ್ಷವಾಗಿ ವಿಜಯ್ ಟೀಕಿಸಿದ್ದಾರೆ.

ಇದರ ನಡುವೆಯೇ ತಮಿಳುನಾಡಿನಲ್ಲಿ ಸಿನಿಮಾ ಕ್ಷೇತ್ರದಿಂದ ಬಂದು ಮುಖ್ಯಮಂತ್ರಿಗಳಾದ ಎಂ.ಜಿ. ರಾಮಚಂದ್ರನ್‌ ಮತ್ತು ಜೆ. ಜಯಲಲಿತಾ ಅವರೊಂದಿಗೆ ವಿಜಯ್ ಅವರನ್ನು ಹೋಲಿಕೆ ಮಾಡಲಾಗುತ್ತಿದೆ. ಆದರೆ ಸಿನಿಮಾರಂಗಕ್ಕೇ ಸೇರಿದವರಾದ ಶಿವಾಜಿ ಗಣೇಶನ್‌, ವಿಜಯಕಾಂತ್ ಮತ್ತು ಕಮಲ ಹಾಸನ್‌ ಅವರು ಅಧಿಕಾರಕ್ಕಾಗಿ ಪಟ್ಟ ಪ್ರಯಾಸವನ್ನೂ ನೆಟ್ಟಿಗರು ನೆನಪಿಸಿಕೊಂಡಿದ್ದಾರೆ. ಸೂಪರ್‌ ಸ್ಟಾರ್ ರಜನಿಕಾಂತ್ ಅವರು ಸ್ಪರ್ಧೆಗೂ ಮೊದಲೇ ಚುನಾವಣೆಯಿಂದ ದೂರ ಸರಿದ ವಿಷಯವೂ ಚರ್ಚೆಯ ಮುನ್ನೆಲೆಗೆ ಬಂದಿದೆ.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ವಂಶಾಡಳಿತ ರಾಜಕಾರಣ ವಿಷಯವಾಗಿ ವಿಜಯ್ ಅವರು ಡಿಎಂಕೆಯನ್ನು ಟೀಕಿಸಿದ್ದಾರೆ. ಬಿಜೆಪಿಯ ‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಆದರೆ ಎಐಎಡಿಎಂಕೆ ಕುರಿತ ಅವರ ಮೃದುಧೋರಣೆ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಟಿವಿಕೆ ಜತೆ ಮೈತ್ರಿ ನಡೆದಿದೆಯೇ ಎಂಬ ಪ್ರಶ್ನೆಗಳು ಹುಟ್ಟುಹಾಕಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.