ADVERTISEMENT

ಆರೋಗ್ಯ ಸೈನಿಕರಿಗಾಗಿ ದೇಶದಾದ್ಯಂತ ಮೊಳಗಿದ ಚಪ್ಪಾಳೆ, ಶಂಖ, ಘಂಟಾನಾದ

ಜನತಾ ಕರ್ಫ್ಯೂ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 13:54 IST
Last Updated 22 ಮಾರ್ಚ್ 2020, 13:54 IST
ಕೊಪ್ಪಳದ ಕೋಟೆ ಪ್ರದೇಶದ ನಾಗರಿಕರು ಜಾಗಟೆ, ಕೊಳಲು, ಚಪ್ಪಾಳೆ ಬಾರಿಸಿ ‘ಆರೋಗ್ಯ ಸೈನಿಕ’ರಿಗೆ ಅಭಿನಂದನೆ ಸಲ್ಲಿಸಿದರು
ಕೊಪ್ಪಳದ ಕೋಟೆ ಪ್ರದೇಶದ ನಾಗರಿಕರು ಜಾಗಟೆ, ಕೊಳಲು, ಚಪ್ಪಾಳೆ ಬಾರಿಸಿ ‘ಆರೋಗ್ಯ ಸೈನಿಕ’ರಿಗೆ ಅಭಿನಂದನೆ ಸಲ್ಲಿಸಿದರು   
""
""
""

ನವದೆಹಲಿ/ಬೆಂಗಳೂರು: ಕೊರೊನಾ ವೈರಸ್‌ ಸೋಂಕು (ಕೋವಿಡ್–19) ಹರಡುವಿಕೆ ತಡೆಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ ‘ಜನತಾ ಕರ್ಫ್ಯೂ’ ದೇಶದಾದ್ಯಂತ ಬಹುತೇಕ ಯಶಸ್ವಿಯಾಗಿ ನಡೆಯುತ್ತಿದೆ.

ಸಂಜೆ ಐದು ಗಂಟೆಯಾಗುತ್ತಿದ್ದಂತೆ ದೇಶದಾದ್ಯಂತ ಜನರು ಮನೆಯಿಂದ ಹೊರಬಂದು ಚಪ್ಪಾಳೆ ತಟ್ಟುವ, ಘಂಟಾನಾದ, ಶಂಖನಾದ ಮಾಡುವ ಮೂಲಕ ‘ಆರೋಗ್ಯ ಸೈನಿಕ’ರಿಗೆ ಗೌರವ ಸಲ್ಲಿಸಿದರು.

ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಕೊಪ್ಪಳ, ದಾವಣಗೆರೆ, ಹೊಸಪೇಟೆ, ಚಾಮರಾಜನಗರ ಸೇರಿದಂತೆ ಹೆಚ್ಚಿನ ಎಲ್ಲ ಜಿಲ್ಲೆಗಳಲ್ಲಿಯೂ ಜನರು ಮನೆಯಿಂದ ಹೊರಬಂದು ಚಪ್ಪಾಳೆ,ಘಂಟಾನಾದ ಮಾಡಿದರು.

ADVERTISEMENT
ಹೊಸಪೇಟೆಯ ಬಹುತೇಕ ಬಡಾವಣೆಯ ಜನ ಅವರ ಮನೆಗಳ ಬಾಲ್ಕನಿಯಲ್ಲಿ ನಿಂತು ಸಂಜೆ ಐದು ಗಂಟೆಗೆ ಚಪ್ಪಾಳೆ ಹೊಡೆದರು. ಜಾಗಟೆ ಬಾರಿಸಿದರು

ಮುಂಬೈಯಲ್ಲಿ ಲಕ್ಷಾಂತರ ಜನರು ಮನೆಯಿಂದ ಹೊರ ಬಂದು ಚಪ್ಪಾಳೆ, ಘಂಟಾನಾದ ಮೊಳಗಿಸಿದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಹ ಚಪ್ಪಾಳೆ ತಟ್ಟುವ ಮೂಲಕ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ಉದ್ಧವ್ ಪುತ್ರ ಆದಿತ್ಯ ಠಾಕ್ರೆ ಸಹ ಜತೆಗೂಡಿದರು.

ಮಂತ್ರಾಲಯ ಮಠದ ಎದುರು ಮೊಳಗಿದ ಜಾಗಟೆ

ಮಂತ್ರಾಲಯದಲ್ಲೂ ಜನತಾ ಕರ್ಫ್ಯೂ ಆಚರಿಸಲಾಯಿತು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹಾಗೂ ಮಠದಲ್ಲಿರುವ ಸಿಬ್ಬಂದಿ ಎಲ್ಲರೂ ಸಂಜೆ 5 ಗಂಟೆಗೆ ಮಠದ ಮುಖ್ಯದ್ವಾರದ ಎದುರು ಜಾಗಟೆ ಧ್ವನಿ ಮೊಳಗಿಸಿದರು. ಸ್ವಾಮೀಜಿ ಚಪ್ಪಾಳೆ ತಟ್ಟಿ ಆರೋಗ್ಯ ಇಲಾಖೆ, ಪೊಲೀಸರು ಹಾಗೂ ಮಾಧ್ಯಮದವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

ಮೈಸೂರಿನಲ್ಲೂ ಮೊಳಗಿತುಚಪ್ಪಾಳೆ ಧ್ವನಿ

ಮೈಸೂರು ನಗರದ ಬಹುತೇಕ ಭಾಗಗಳಲ್ಲಿ ಸಾರ್ವಜನಿಕರು ಚಪ್ಪಾಳೆ ತಟ್ಟುವ ಮೂಲಕ, ಜಾಗಟೆ ಹಾಗೂ ಗಂಟೆಗಳನ್ನು ಭಾರಿಸುವ ಮೂಲಕ ಕೊರೊನಾ ವೈರಸ್ ತಡೆಗೆ ಶ್ರಮಿಸುತ್ತಿರುವ ವೈದ್ಯರು, ಶುಶ್ರೂಷಕರು ಮತ್ತು ಪೊಲೀಸರು ಸೇರಿದಂತೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯಂತೆ ಭಾನುವಾರ ಸಂಜೆ 5 ಗಂಟೆಯ ವೇಳೆಗೆ ಮನೆಯ ಮುಂದೆ ಸೇರಿದ ಜನರು ಏಕಕಾಲಕ್ಕೆ ಚಪ್ಪಾಳೆ ತಟ್ಟಿದರು. ಕೆಲವೆಡೆ ಜಾಗಟೆ ಹಾಗೂ ಗಂಟೆಗಳನ್ನೂ ಭಾರಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿನ ಅಧಿಕಾರಿಗಳು, ಸಿಬ್ಬಂದಿ, ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಅಪೊಲೊ ಆಸ್ಪತ್ರೆಯ ಸಿಬ್ಬಂದಿ, ಹೆಬ್ಬಾಳದ ಅಗ್ನಿಶಾಮಕ ಪಡೆಯ ಅಧಿಕಾರಿಗಳು ಸೇರಿದಂತೆ ಹಲವೆಡೆ ಕರತಾಡನ ಮಾಡಿದರು. ಅಪಾರ್ಟ್‌ಮೆಂಟ್‌ಗಳಲ್ಲಿ ಜನರು ಹೊರಗಡೆ ಬಂದು ಜಾಗಟೆ ಬಾರಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇಂದು ಸಂಜೆ ದೆಹಲಿ ನಿವಾಸದಲ್ಲಿ ತಮ್ಮ ಪತ್ನಿ ಜ್ಯೋತಿ ಜೋಶಿ ಹಾಗೂ ಆಪ್ತ ಸಿಬಂಧಿಗಳೊಂದಿಗೆ ಚಪ್ಪಾಳೆ ತಟ್ಟುವ ಮುಲಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲ್ಲ ವೈದ್ಯರಿಗೆ ಹಾಗೂ ಅರೋಗ್ಯ ಸಿಬ್ಬಂದಿಗೆ ತಮ್ಮ ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.