ಮುಂಬೈ: ‘ಬಲಪಂಥೀಯ ಸಂಘಟನೆಗಳಿಗೆ ಇದುವರೆಗೆ ಒಬ್ಬ ದೊಡ್ಡ ಕವಿಯನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ’ ಎಂದು ಖ್ಯಾತ ಲೇಖಕ, ಗೀತ ರಚನೆಕಾರ ಜಾವೇದ್ ಅಖ್ತರ್ ಹೇಳಿದರು.
ಅಣ್ಣಾಬಾವು ಸಾಠೆ ಸಭಾಂಗಣದಲ್ಲಿ ದಲಿತ ಹೋರಾಟಗಾರ ನಾಮ್‌ದೇವ್ ಡಸಾಲ್ ಅವರ ಸ್ಮರಣಾರ್ಥ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಜಾವೇದ್ ಅವರಿಗೆ ‘ನಾಮ್‌ದೇವ್ ಡಸಾಲ್ ಸಮಷ್ಠಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.
ನಂತರ ಮಾತನಾಡಿದ ಜಾವೇದ್ ಅವರು, ‘ಪ್ರೇಮಕಾವ್ಯಗಳನ್ನು ಕೇಳಿದವರಿಗೆ ಕಾವ್ಯವು ಪ್ರೇಮದ ಭಾಷೆ ಮಾತ್ರ ಅಲ್ಲ, ನ್ಯಾಯದ ಭಾಷೆಯೂ ಹೌದು ಎನ್ನುವುದು ತಿಳಿದಿರುವುದಿಲ್ಲ. ಜಗತ್ತಿನಾದ್ಯಂತ ಕಾವ್ಯದ ಮೌಲ್ಯ ವ್ಯವಸ್ಥೆಯನ್ನು ಬಲಪಂಥೀಯರು ಸಾಂಸ್ಕೃತಿಕ ಅನುಕೂಲಸಿಂಧು ಆಗಿಸಿಕೊಂಡಿದ್ದಾರೆ. ಇದೇ ಕಾರಣದಿಂದ ಜಗತ್ತಿನ ಇತಿಹಾಸದಲ್ಲಿ ಬಲಪಂಥವು ಒಬ್ಬನೇ ಒಬ್ಬ ದೊಡ್ಡ ಕವಿಯನ್ನು ಹುಟ್ಟುಹಾಕಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.
‘ಕಾವ್ಯವು ಸಮಾನತೆ, ನ್ಯಾಯದಲ್ಲಿ ನಂಬಿಕೆ ಇಟ್ಟಿದೆ. ಈ ಮೌಲ್ಯಗಳನ್ನು ಪ್ರತಿಪಾದಿಸುವ ಕಾವ್ಯವನ್ನು ಪ್ರಪಂಚದಾದ್ಯಂತ ಸ್ವೀಕರಿಸಲಾಗುತ್ತದೆ. ದೊಡ್ಡ ಕವಿ ಎಂದರೆ ನ್ಯಾಯದ ಬಗ್ಗೆ ಧ್ವನಿ ಎತ್ತುವವ ಎಂದರ್ಥ’ ಎಂದರು.
‘ಮೀನಿಗೆ ಧ್ವನಿತಂತು ಇರುವುದಿಲ್ಲ. ಹಾಗಾಗಿ ಅದರ ನೋವು ಅರ್ಥವಾಗುವುದಿಲ್ಲ. ಆದರೆ ಕಾವ್ಯವು ನ್ಯಾಯದ ಭಾಷೆ ಮತ್ತು ಸಮಾಜದ ಧ್ವನಿತಂತು’ ಎಂದು ವರ್ಣಿಸಿದರು.
‘ಮಹಾತ್ಮ ಫುಲೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ಧ್ವನಿಗಳಿಗೆ ಧ್ವನಿತಂತುಗಳನ್ನು ನೀಡಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.