ಸಾಂದರ್ಭಿಕ ಚಿತ್ರ
ಚಂಡೀಗಢ: ಸೌಂದರ್ಯವನ್ನು ಸಹಿಸಲಾಗದೇ ಹೊಟ್ಟೆಕಿಚ್ಚಿನಿಂದ ಮಹಿಳೆಯೊಬ್ಬರು ಮೂವರು ಹುಡುಗಿಯರನ್ನು ಕೊಂದಿರುವ ಪ್ರಕರಣವನ್ನು ಹರಿಯಾಣ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ 32 ವರ್ಷದ ಪೂನಂ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಮೂವರು ಬಾಲಕಿಯರ ಹತ್ಯೆ ಮಾಡಿದ್ದಾಳೆ. ಸುಂದರವಾಗಿದ್ದರು ಎಂಬ ಕಾರಣಕ್ಕೆ ಬಾಲಕಿಯರ ಮೇಲೆ ಪೂನಂ ದ್ವೇಷ ಬೆಳೆಸಿಕೊಂಡಿದ್ದಳು ಎಂದು ವರದಿ ತಿಳಿಸಿದೆ. ಹತ್ಯೆಯಾದ ಬಾಲಕಿಯರು ಮಹಿಳೆಯ ಸಂಬಂಧಿಕರೇ ಆಗಿದ್ದಾರೆ. ಇದಲ್ಲದೆ, ಪೂನಂ ತನ್ನ ಮೂರು ವರ್ಷದ ಮಗನನ್ನೂ ಕೊಂದಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಆಕಸ್ಮಿಕ ಎಂದು ಬಿಂಬಿಸಲು ಯತ್ನ
ಈ ಮೂರೂ ಹತ್ಯೆಗಳನ್ನು ಆಕಸ್ಮಿಕ ಸಾವುಗಳೆಂದು ಬಿಂಬಿಸಲು ನೀರಿನ ತೊಟ್ಟಿಗಳಲ್ಲಿ ಮುಳುಗಿಸಿ ಕೊಂದಿದ್ದಳು ಎಂದು ವರದಿ ತಿಳಿಸಿದೆ. ಪೊಲೀಸರ ಪ್ರಕಾರ, ಪೂನಂ ಅವರು ಮಾಡಿದ ಮೂರನೇ ಹತ್ಯೆಯು ಅವರ ಸೋದರ ಸಂಬಂಧಿ 6 ವರ್ಷದ ಬಾಲಕಿಯಾಗಿದ್ದು, ಕುಟುಂಬದ ಮದುವೆಯಲ್ಲೇ ಕೊಂದಿದ್ದಳು.
ಪಾಣಿಪತ್ ಜಿಲ್ಲೆಯ ನೌಲ್ತಾ ಗ್ರಾಮದಲ್ಲಿ ಸೋಮವಾರ ಆರು ವರ್ಷದ ಬಾಲಕಿ ನಾಪತ್ತೆಯಾಗಿದ್ದರು. ಸಂಭ್ರಮದಿಂದ ಇರಬೇಕಿದ್ದ ಮದುವ ಮನೆಯಲ್ಲಿ ದುಃಖ ಆವರಿಸಿತ್ತು. ಬಳಿಕ, ಮನೆಯ ಮೊದಲ ಮಹಡಿಯಲ್ಲಿರುವ ಸ್ಟೋರ್ ರೂಂನಲ್ಲಿ ನೀರು ತುಂಬಿದ ಪ್ಲಾಸ್ಟಿಕ್ ಟಬ್‌ನಲ್ಲಿ ಮೃತದೇಹ ಪತ್ತೆಯಾಗಿದೆ. ಬಾಲಕಿಯ ತಲೆ ನೀರಿನಲ್ಲಿ ಮುಳುಗಿತ್ತು. ದೇಹ ಮತ್ತು ಪಾದಗಳು ಹೊರಗಿದ್ದವು. ಹಲವು ಕೋನಗಳಿಂದ ತನಿಖೆ ನಡೆಸಿದ ಪೊಲೀಸರು, ಬುಧವಾರ ಹುಡುಗಿಯ ಚಿಕ್ಕಮ್ಮ ಪೂನಂ ಅವರನ್ನು ಕೊಲೆ ಆರೋಪದ ಮೇಲೆ ಬಂಧಿಸಿದ್ದಾರೆ.
ಮದುವೆಗೆ ಬಂದಿದ್ದ ಅತಿಥಿಗಳೆಲ್ಲ ಹೋದ ಬಳಿಕ 6 ವರ್ಷದ ವಿಧಿ ಎಂಬ ಬಾಲಕಿಯನ್ನು ಹತ್ಯೆ ಮಾಡಲಾಗಿದೆ. ವಿಧಿಯನ್ನು ಹಿಂಬಾಲಿಸಿಕೊಂಡು ಮಹಡಿಗೆ ಹೋದ ಪೂನಂ ಸ್ಟೋರ್ ರೂಮ್‌ನಲ್ಲಿ ನೀರು ತುಂಬಿದ್ದ ಟಬ್‌ನಲ್ಲಿ ಆಕೆಯನ್ನು ಮುಳುಗಿಸಿ, ಉಸಿರುಗಟ್ಟಿಸಿ ಕೊಂದಿದ್ದಾಳೆ. ಬಳಿಕ, ಹೊರಗಿನಿಂದ ರೂಮಿಗೆ ಬೀಗ ಹಾಕಿ ಕೆಳಗೆ ಬಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ ಪ್ರಕಾರ, 2023ರಲ್ಲಿ, ಸೋನಿಪತ್‌ನ ಭವಾರ್ ಗ್ರಾಮದಲ್ಲಿರುವ ತಮ್ಮ ಮನೆಯ ನೀರಿನ ತೊಟ್ಟಿಯಲ್ಲಿ ತನ್ನ ಅತ್ತಿಗೆಯ ಒಂಬತ್ತು ವರ್ಷದ ಮಗಳನ್ನು ಮುಳುಗಿಸಿ ಕೊಂದಿದ್ದಾಗಿ ಪೂನಂ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ. ಅಲ್ಲದೆ, ನಾನೇ ಹತ್ಯೆ ಮಾಡಿದ್ದೇನೆಂದು ಕುಟುಂಬವು ಅನುಮಾನಿಸಬಹುದೆಂಬ ಭಯದಿಂದ, 3 ವರ್ಷದ ಮಗ ಶುಭಂನನ್ನೂ ಕೊಂದಿದ್ದಾಗಿ ಹೇಳಿಕೊಂಡಿದ್ದಾಳೆ.
2025ರ ಆಗಸ್ಟ್‌ನಲ್ಲಿ, ಸೇವಾ ಹಳ್ಳಿಯಲ್ಲಿ ತನ್ನ ಸೋದರ ಸಂಬಂಧಿಯ ಆರು ವರ್ಷದ ಮಗಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದಿದ್ದಾಳೆ ಎಂದೂ ವರದಿ ತಿಳಿಸಿದೆ.
ಮಹಿಳೆ ಸುಂದರವಾದ ಹುಡುಗಿಯರ ಬಗ್ಗೆ ದ್ವೇಷ ಬೆಳೆಸಿಕೊಂಡಿದ್ದಳು. ಸುಂದರ ಹುಡುಗಿಯನ್ನು ನೋಡಿದ ತಕ್ಷಣ, ಅವಳು ದೊಡ್ಡವಳಾದಾಗ ತನಗಿಂತ ಸುಂದರವಾಗಿರುತ್ತಾಳೆ ಎಂದು ಅಸೂಯೆ ಪಡುತ್ತಿದ್ದಳು ಎಂದು ಪಾಣಿಪತ್ ಪೊಲೀಸ್ ವರಿಷ್ಠಾಧಿಕಾರಿ ಭೂಪೇಂದರ್ ಸಿಂಗ್ ತಿಳಿಸಿದ್ದಾರೆ.
‘ತನ್ನ ಮದುವೆ ಬಳಿಕ ಆಕೆ ಇಂತಹ ಅಸೂಯೆ ಪ್ರವೃತ್ತಿ ಬೆಳೆಸಿಕೊಂಡಿದ್ದು, ಮಾನಸಿಕ ಅಸ್ವಸ್ಥಳಂತೆ ಕಾಣುತ್ತಿದ್ದಾಳೆ’ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.