ಭದ್ರತಾ ಪಡೆ
(ಪಿಟಿಐ ಚಿತ್ರ)
ಮೇದಿನಿನಗರ, ಜಾರ್ಖಂಡ್: ಇಲ್ಲಿನ ಪಲಾಮು ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಂಘಟನೆಯ ಕಮಾಂಡರ್ ಮೃತಪಟ್ಟಿದ್ದಾರೆ.
ಎನ್‌ಕೌಂಟರ್‌ನಲ್ಲಿ ಮತ್ತೊಬ್ಬ ಸದಸ್ಯ ಗಾಯಗೊಂಡಿದ್ದು, ಆತನ ತಲೆಗೆ ₹15 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಸ್ಥಳದಿಂದ ಸ್ವಯಂಚಾಲಿತ ರೈಫಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಹೈದರ್‌ನಗರ್ ಹಾಗೂ ಮೊಹಮ್ಮದ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಮಧ್ಯದಲ್ಲಿರುವ ಸೀತಾಚುವಾನ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ. ನಕ್ಸಲ್ ತುಳಸಿ ಭುನಿಯಾನ್ ಅವರ ಮೃತದೇಹ ಸಿಕ್ಕಿದೆ’ ಎಂದು ಪಲಾಮು ಡಿಐಜಿ ವೈ.ಎಸ್.ರಮೇಶ್ ತಿಳಿಸಿದ್ದಾರೆ.
‘ಮತ್ತೊಬ್ಬ ನಕ್ಸಲ್ ನಿತೀಶ್ ಯಾದವ್ ಅವರು ಗುಂಡೇಟಿನಿಂದ ಗಾಯಗೊಂಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಕಳೆದ ಕೆಲವು ದಿನಗಳಿಂದ ದೊಡ್ಡ ಪ್ರಮಾಣದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಆರಂಭಿಸಲಾಗಿದ್ದು, ಮೂವರು ಪ್ರಮುಖ ನಕ್ಸಲ್ ಮುಖಂಡರನ್ನು ಹತ್ಯೆ ಮಾಡಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ 18 ಮಂದಿ ನಕ್ಸಲರು ಸೋಮವಾರ ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ. ಈ ಪೈಕಿ 10 ಮಂದಿಯ ಮಾಹಿತಿ ನೀಡಿದವರಿಗೆ ಸರ್ಕಾರ ₹38 ಲಕ್ಷ ಬಹುಮಾನ ಘೋಷಿಸಿತ್ತು.
‘ನಕ್ಸಲರು ಸ್ಥಳೀಯ ಬುಡಕಟ್ಟು ಸಮುದಾಯದ ಜನರ ಮೇಲೆ ನಡೆಸುತ್ತಿದ್ದ ಅಮಾನವೀಯ ದಾಳಿಗೆ ಬೇಸತ್ತು ಈ ನಕ್ಸಲರು ಸ್ವಯಂಪ್ರೇರಿತರಾಗಿ ಶರಣಾಗತರಾಗಲು ಮುಂದೆ ಬಂದಿದ್ದಾರೆ’ ಎಂದು ಸುಕ್ಮಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವ್ಹಾಣ್ ತಿಳಿಸಿದರು.
ಕಳೆದ ವರ್ಷ ಸುಕ್ಮಾ ಜಿಲ್ಲೆ ಸೇರಿದಂತೆ ಬಸ್ತಾರ್ ಪ್ರಾಂತ್ಯದ ಏಳು ಜಿಲ್ಲೆಗಳಲ್ಲಿ 792 ನಕ್ಸಲರು ಶರಣಾಗತರಾಗಿದ್ದರು.
ಒಡಿಶಾದ ರಾಯಗಢ ಪೊಲೀಸ್ ವರಿಷ್ಠಾಧಿಕಾರಿಯ ಮುಂದೆ ಛತ್ತೀಸಗಢ ಬಿಜಾಪುರ ಜಿಲ್ಲೆಯ ಸಿಪಿಐ(ಮಾವೋವಾದಿ) ನಕ್ಸಲ್ ಬಿಜಯ್ ಪುಣೇಂ ಅವರು ಶರಣಾದರು. ಅವರ ತಲೆಗೆ ಸರ್ಕಾರ ₹4 ಲಕ್ಷ ಬಹುಮಾನ ಘೋಷಿಸಿತ್ತು ಎಂದು ಒಡಿಶಾ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಛತ್ತೀಸಗಢ ಬಸ್ತಾರ್ ಪ್ರಾಂತ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ಸಂಘಟನೆಯ ಉನ್ನತ ಕಮಾಂಡರ್ ಬಸವರಾಜು ಹತ್ಯೆಯಾದ ಬಳಿಕ ನಕ್ಸಲರು ಭೂಗತ ಬೆಂಬಲಿಗರ ಮೇಲೆ ಪೊಲೀಸರು ಹಾಗೂ ಗುಪ್ತಚರ ಇಲಾಖೆಯು ತೀವ್ರ ನಿಗಾ ವಹಿಸಿದೆ. ‘ಬಸವರಾಜು ಜೊತೆಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಹಲವು ಕಾರ್ಯಕರ್ತರು ಇತ್ತೀಚೆಗೆ ಪೊಲೀಸರ ಮುಂದೆ ಶರಣಾಗಿದ್ದರು. ಅವರು ನೀಡಿದ ಮಾಹಿತಿ ಆಧರಿಸಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಪ್ರಮುಖ ನಾಯಕರೊಬ್ಬರನ್ನು ಕಳೆದುಕೊಳ್ಳುವಂತಾಯಿತು’ ಎಂದು ದಂಡಾಕಾರಣ್ಯ ವಿಶೇಷ ವಲಯ ಸಮಿತಿ (ಡಿಕೆಎಸ್‌ಝಡ್‌ಸಿ) ವಕ್ತಾರರು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿದ ಮೂರು ಪುಟದ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.