ADVERTISEMENT

ರೋಪ್‌ವೇಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ: ಐಎಎಫ್‌ ಅಪಾಯಕಾರಿ ಸಾಹಸದ ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಏಪ್ರಿಲ್ 2022, 10:13 IST
Last Updated 12 ಏಪ್ರಿಲ್ 2022, 10:13 IST
ಭಾರತೀಯ ವಾಯುಪಡೆಯಿಂದ ರಕ್ಷಣಾ ಕಾರ್ಯಾಚರಣೆ – ಚಿತ್ರ ಕೃಪೆ: ಐಎಎಫ್‌ ಟ್ವಿಟರ್ ಖಾತೆ
ಭಾರತೀಯ ವಾಯುಪಡೆಯಿಂದ ರಕ್ಷಣಾ ಕಾರ್ಯಾಚರಣೆ – ಚಿತ್ರ ಕೃಪೆ: ಐಎಎಫ್‌ ಟ್ವಿಟರ್ ಖಾತೆ   

ದೇವಘರ್: ಜಾರ್ಖಂಡ್‌ನ ದೇವಘರ್ ಜಿಲ್ಲೆಯ ಬಾಬಾ ವೈದ್ಯನಾಥ ದೇಗುಲ ಬಳಿಯ ತ್ರಿಕೂಟ ಪರ್ವತ ಪ್ರದೇಶದಲ್ಲಿ ರೋಪ್‌ವೇ ದುರಂತ ಸಂಭವಿಸಿ ಎರಡು ದಿನಗಳಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮಂಗಳವಾರ ಬೆಳಿಗ್ಗೆ ರಕ್ಷಣಾ ಕಾರ್ಯಾಚರಣೆ ಪುನರಾರಂಭಿಸಲಾಗಿದೆ ಎಂದು ಟ್ವೀಟ್ ಮಾಡಿರುವ ಭಾರತೀಯ ವಾಯುಪಡೆ (ಐಎಎಫ್‌), ಅಪಾಯಕಾರಿ ಸಾಹಸದ ವಿಡಿಯೊ ತುಣುಕನ್ನು ಟ್ವೀಟ್ ಮಾಡಿದೆ.

ಕಡಿದಾದ ಪರ್ವತಗಳ ನಡುವಣ ರೋಪ್‌ವೇಯಲ್ಲಿ ಸಿಲುಕಿರುವವರನ್ನು ವಾಯುಪಡೆಯ ಹೆಲಿಕಾಪ್ಟರ್‌ಗಳಲ್ಲಿರುವ ಸಿಬ್ಬಂದಿಯು ಹಗ್ಗ ಹಾಗೂ ಇತರ ರಕ್ಷಣಾ ಸಲಕರಣೆಗಳ ನೆರವಿನಿಂದ ಹರಸಾಹಸ ಪಟ್ಟು ರಕ್ಷಣೆ ಮಾಡುತ್ತಿರುವ ದೃಶ್ಯ ಈ ವಿಡಿಯೊದಲ್ಲಿದೆ.

ADVERTISEMENT

ರೋಪ್‌ವೇ ಕೇಬಲ್ ಕಾರುಗಳಲ್ಲಿ ಸಿಲುಕಿರುವ ಪ್ರತಿಯೊಬ್ಬರನ್ನೂ ಆದಷ್ಟು ಬೇಗ ರಕ್ಷಿಸಲಾಗುವುದು ಎಂದು ವಾಯುಪಡೆ ಟ್ವೀಟ್‌ನಲ್ಲಿ ತಿಳಿಸಿದೆ.

ಸೋಮವಾರದ ರಕ್ಷಣಾ ಕಾರ್ಯಾಚರಣೆ ವೇಳೆ ಹೆಲಿಕಾಪ್ಟರ್ ಹತ್ತುವ ಯತ್ನದಲ್ಲಿ ವ್ಯಕ್ತಿಯೊಬ್ಬರು ಆಯತಪ್ಪಿ ಬಿದ್ದು ಮೃತಪಟ್ಟಿದ್ದು, ಮಂಗಳವಾರವೂ ಒಬ್ಬರು ಆಯತಪ್ಪಿ ಬಿದ್ದಿದ್ದಾರೆ. ಇದರೊಂದಿಗೆ, ದುರಂತದಲ್ಲಿ ಈವರೆಗೆ ಮೂವರು ಮೃತಪಟ್ಟಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.