ADVERTISEMENT

56 ಇಂಚಿನ ಹೇಡಿತನ: ಪ್ರಧಾನಿ ಕಾರ್ಯಾಲಯದ ವಿರುದ್ಧ ಜಿಗ್ನೇಶ್ ಮೆವಾನಿ ಆಕ್ರೋಶ

ಪಿಟಿಐ
Published 2 ಮೇ 2022, 9:16 IST
Last Updated 2 ಮೇ 2022, 9:16 IST
ಜಿಗ್ನೇಶ್ ಮೆವಾನಿ
ಜಿಗ್ನೇಶ್ ಮೆವಾನಿ   

ನವದೆಹಲಿ: ‘ಅಸ್ಸಾಂ ಪೊಲೀಸರು ನನ್ನನ್ನು ಬಂಧಿಸಿರುವುದರ ಹಿಂದೆ ಪ್ರಧಾನಿ ಕಾರ್ಯಾಲಯದ (ಪಿಎಂಒ) ಪೂರ್ವಯೋಜಿತ ಸಂಚು ಕೆಲಸ ಮಾಡಿದೆ’ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನನ್ನನ್ನು ನಾಶ ಮಾಡಲು ಸಂಚು ರೂಪಿಸಲಾಗಿದೆ. ಇದು ‘56 ಇಂಚಿನ ಹೇಡಿತನ’ದ ಕೃತ್ಯ’. ಇದರಿಂದಾಗಿ ಗುಜರಾತ್‌ನ ವರ್ಚಸ್ಸಿಗೆ ಧಕ್ಕೆಯಾಗಿದೆ’ ಎಂದು ಟೀಕಿಸಿದ್ದಾರೆ.

ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ, ಮುಂಡ್ರಾ ಬಂದರಿನಿಂದ ಇತ್ತೀಚೆಗೆ ₹1.75 ಲಕ್ಷ ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿರುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜೂನ್ 1ರಂದು ಗುಜರಾತ್ ಬಂದ್ ಆಚರಿಸಲಾಗುವುದು. ಉನಾದಲ್ಲಿ ದಲಿತರ ಮೇಲೆ ದಾಖಲಿಸಿರುವ ಹಾಗೂ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಖಲಿಸಿರುವ ಪ್ರಕರಣಗಳ ವಾಪಸ್ ಪಡೆಯುವಿಕೆಗೆ ಆಗ್ರಹಿಸಿ ಅದೇ ದಿನ ಪ್ರತಿಭಟನೆ ನಡೆಸುವುದಾಗಿಯೂ ಅವರು ತಿಳಿಸಿದ್ದಾರೆ.

ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಆರೋಪದಡಿ ಮೆವಾನಿ ಅವರನ್ನು ಅಸ್ಸಾಂನ ಪೊಲೀಸರು ಏ.19ರಂದು ಬಂಧಿಸಿದ್ದರು. ಪ್ರಧಾನಿ ಅವರನ್ನು ಉಲ್ಲೇಖಿಸಿ ‘ಗೋಡ್ಸೆಯನ್ನು ದೇವರಂತೆ ಪರಿಗಣಿಸಲಾಗಿದೆ’ ಎಂದು ಮೆವಾನಿ ಟ್ವೀಟ್ ಮಾಡಿದ್ದರು. ಈ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡ ಅವರನ್ನು, ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಹಾಗೂ ಸರ್ಕಾರಿ ಸೇವೆಗೆ ಅಡ್ಡಿ ಆರೋಪಗಳಿಗೆ ಸಂಬಂಧಿಸಿ ಮತ್ತೆ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಏಪ್ರಿಲ್ 29ರಂದು ಮೆವಾನಿಗೆ ಅಸ್ಸಾಂನ ಬಾರ್ಪೇಟಾ ಜಿಲ್ಲಾ ನ್ಯಾಯಾಲಯವು ಜಾಮೀನು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.