ADVERTISEMENT

ಬೆಂಗಳೂರಿನಲ್ಲಿ ಜೆಎಂಬಿ ಉಗ್ರರ 22 ಅಡಗುತಾಣ

ಶೆಮಿಜ್‌ ಜಾಯ್‌
Published 14 ಅಕ್ಟೋಬರ್ 2019, 11:40 IST
Last Updated 14 ಅಕ್ಟೋಬರ್ 2019, 11:40 IST
   

ನವದೆಹಲಿ: ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆ ಜಮಾತ್–ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್‌(ಜೆಎಂಬಿ) ಸಂಘಟನೆ ನಗರದಲ್ಲಿ ಸುಮಾರು 22 ಅಡಗುತಾಣಗಳನ್ನು ಹೊಂದಿದೆ. ಕರ್ನಾಟಕಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಕೃಷ್ಣಗಿರಿ ಬೆಟ್ಟಸಾಲಿನಲ್ಲಿ ರಾಕೆಟ್‌ ಲಾಂಚರ್‌ಗಳನ್ನು ಪರೀಕ್ಷೆ ಮಾಡಿದೆ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊಭಾಲ್ ಸಮಕ್ಷಮ ಭಯೋತ್ಪಾದನಾ ನಿಗ್ರಹ ದಳಗಳ ಮುಖ್ಯಸ್ಥರ ಸಮಾವೇಶದಲ್ಲಿ ಮಾತನಾಡಿದ ರಾಷ್ಟ್ರೀಯ ತನಿಖಾ ದಳದ ನಿರ್ದೇಶಕ ವೈ.ಸಿ.ಮೋದಿ ಮತ್ತು ಇನ್‌ಸ್ಪೆಕ್ಟರ್ ಜನರಲ್ ಅಲೋಕ್ ಮಿತ್ತಲ್ ಈ ಮಾಹಿತಿ ಹಂಚಿಕೊಂಡರು.

ದೇಶದ ವಿವಿಧೆಡೆ ಬಾಂಗ್ಲಾಒಳನುಸುಳುಕೋರರಂತೆ ವೇಷ ಮರೆಸಿಕೊಂಡಿರುವ ಸುಮಾರು 125 ಶಂಕಿತರ ಮೇಲೆ ನಿಗಾ ಇರಿಸಲಾಗಿದೆ. ಜಾರ್ಖಂಡ್, ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಲ್ಲಿ ಈ ಸಂಘಟನೆಯ ಚಟುವಟಿಕೆ ಕಂಡುಬರುತ್ತಿದೆ ಎಂದು ವೈ.ಸಿ.ಮೋದಿ ಹೇಳಿದರು.

2014ರಿಂದ 2018ರ ನಡುವಣ ಅವಧಿಯಲ್ಲಿ ಬೆಂಗಳೂರಿನಲ್ಲಿ ಈ ಸಂಘಟನೆಯು ಅಡಗುದಾಣಗಳನ್ನು ರೂಪಿಸಿಕೊಂಡಿದೆ. ಸಂಚು ರೂಪಿಸುವ ಸಭೆಗಳು ಈಗ ಬೆಂಗಳೂರಿನಲ್ಲಿ ನಡೆಯುತ್ತಿವೆ. ಸುಧಾರಿತ ಸ್ಫೋಟಕಗಳು ಮತ್ತು ರಾಕೆಟ್‌ ಲಾಂಚರ್‌ಗಳನ್ನು ತಮಿಳುನಾಡು–ಕರ್ನಾಟಕ ಗಡಿಯಲ್ಲಿರುವ ಕೃಷ್ಣಗಿರಿ ಬೆಟ್ಟಗಳಲ್ಲಿ ಪ್ರಯೋಗಿಸಿದೆ ಎಂದು ಮಿತ್ತಲ್ ಮಾಹಿತಿ ನೀಡಿದರು.

ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್‌) ಭಯೋತ್ಪಾದನಾ ಸಂಘಟನೆಯೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಈವರೆಗೆ 127 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಹಲವರು ಮುಂಬೈ ಮೂಲದ ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್‌ ಅವರ ಭಾಷಣದಿಂದ ಪ್ರೇರಣೆ ಪಡೆದಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.