ADVERTISEMENT

ಬಿಜೆಪಿ ಸೇರಲು ಶಾ ಆಹ್ವಾನ: ಸಿಪಿಎಂ ಸಂಸದೆ ಆರೋಪ‍

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 20:00 IST
Last Updated 19 ಜುಲೈ 2019, 20:00 IST
ಅಮಿತ್‌ ಶಾ
ಅಮಿತ್‌ ಶಾ   

ನವದೆಹಲಿ: ಬಿಜೆಪಿಗೆ ಸೇರುವಂತೆಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ತಮಗೆ ಆಹ್ವಾನ ಕೊಟ್ಟಿದ್ದಾರೆ ಎಂದು ತ್ರಿಪುರದ ಸಿಪಿಎಂನ ರಾಜ್ಯಸಭಾ ಸದಸ್ಯೆ ಜರ್ನಾ ದಾಸ್‌ ಬೈದ್ಯ ಆರೋಪಿಸಿದ್ದಾರೆ.

ತ್ರಿಪುರದಲ್ಲಿ ಪಂಚಾಯಿತಿ ಚುನಾವಣೆ ಘೋಷಣೆಯಾದಾಗಿನಿಂದ ಭಾರಿ ಪ್ರಮಾಣದಲ್ಲಿ ಹಿಂಸಾಚಾರ ಆಗುತ್ತಿದೆ. ಹಿಂಸಾಚಾರ ತಡೆಗೆ ಕೇಂದ್ರ ಗೃಹ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ಶಾ ಅವರನ್ನು ಕೇಳಿಕೊಳ್ಳಲು ಹೋದಾಗ ಅವರು ತಮಗೆ ಆಹ್ವಾನ ಕೊಟ್ಟರು ಎಂದು ಜರ್ನಾ ಹೇಳಿಕೊಂಡಿದ್ದಾರೆ.

‘ಅವರು ಹಾಸ್ಯ ಮಾಡುತ್ತಿದ್ದರೋ ಅಥವಾ ನಿಜಕ್ಕೂ ಹೇಳಿದರೋ ಗೊತ್ತಿಲ್ಲ. ಕಮ್ಯುನಿಸ್ಟ್‌ ಪಕ್ಷದ ಕತೆ ಮುಗಿಯಿತು. ಈಗಲೂ ಆ ಪಕ್ಷದಲ್ಲಿ ಯಾಕೆ ಇದ್ದೀರಿ? ನೀವು ನಮ್ಮ ಜತೆ ಸೇರಿ ಎಂದರು. ‘ಯಾಕೆ’ ಎಂದು ಪ್ರಶ್ನಿಸಿದೆ. ತ್ರಿ‍ಪುರದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ನಿಮ್ಮನ್ನು ಭೇಟಿಯಾಗಿದ್ದೇನೆ. ಬಿಜೆಪಿ ಅಧ್ಯಕ್ಷ ಎಂಬ ನೆಲೆಯಲ್ಲಿ ನಿಮ್ಮನ್ನು ಭೇಟಿಯಾಗಲು ಬಂದಿಲ್ಲ. ಗೃಹ ಸಚಿವರು ಎಂಬ ಕಾರಣಕ್ಕೆ ಬಂದಿದ್ದೇನೆ ಎಂದೆ’ ಎಂದು ಜರ್ನಾ ವಿವರಿಸಿದ್ದಾರೆ.

ADVERTISEMENT

2022ರ ಏಪ್ರಿಲ್‌ವರೆಗೆ ಜರ್ನಾ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಇದೆ.ರಾಜ್ಯಸಭೆಯಲ್ಲಿ ಬಹುಮತ ಪಡೆಯುವುದಕ್ಕಾಗಿ ವಿರೋಧ ಪಕ್ಷಗಳ ಸದಸ್ಯರನ್ನು ಬಿಜೆಪಿ ಸೆಳೆಯುತ್ತಿದೆ ಎಂದು ವಿಪಕ್ಷಗಳ ನಾಯಕರು ಹೇಳುತ್ತಿದ್ದಾರೆ.

245 ಸದಸ್ಯರ ಸದನದಲ್ಲಿ ಬಿಜೆಪಿ ಈಗ 78 ಸದಸ್ಯರನ್ನು ಹೊಂದಿದೆ. ಐದು ಸ್ಥಾನಗಳು ಖಾಲಿಯಿವೆ. ಎನ್‌ಡಿಎಗೆ 115 ಸದಸ್ಯರ ಬಲ ಇದೆ. ಏಳು ಸದಸ್ಯರನ್ನು ಹೊಂದಿರುವ ಬಿಜೆಡಿ, ಇಬ್ಬರು ಸದಸ್ಯರ ವೈಎಸ್‌ಆರ್‌ ಕಾಂಗ್ರೆಸ್‌, ಎನ್‌ಡಿಎ ಪರವಾಗಿಯೇ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.