ಲೋಕಸಭೆ
– ಪಿಟಿಐ
ನವದೆಹಲಿ: ಕನಿಷ್ಠ 30 ದಿನ ಜೈಲಿನಲ್ಲಿ ಬಂಧಿಯಾಗುವ ಉನ್ನತ ರಾಜಕೀಯ ಮುಖಂಡರನ್ನು ತೆಗೆದುಹಾಕುವ ವಿವಾದಾತ್ಮಕ ಮಸೂದೆಗಳನ್ನು ಪರಿಶೀಲಿಸಲು ಸಂಸತ್ತಿನ ಜಂಟಿ ಸಮಿತಿಯನ್ನು ರಚಿಸಲಾಗಿದೆ.
ಸಮಿತಿ ರಚನೆಗೆ ಸಂಬಂಧಿಸಿದಂತೆ, ಸಂಸದರ ಸಮಿತಿಯ ಪರಿಶೀಲನೆಗೆ ಕಳುಹಿಸುವ ನಿರ್ಣಯವನ್ನು ಸಂಸತ್ತು ಅಂಗೀಕರಿಸಿ 84 ದಿನಗಳು ಕಳೆದಿವೆ. ಆದರೆ, ಎನ್‌ಸಿಪಿ(ಎಸ್‌ಪಿ) ಹೊರತುಪಡಿಸಿ ಇಂಡಿಯಾ ಮೈತ್ರಿಕೂಟವು ಯಾವುದೇ ಸಂಸದರನ್ನು ಈ ಸಮಿತಿಗೆ ನಾಮನಿರ್ದೇಶನ ಮಾಡಲು ನಿರಾಕರಿಸಿದ್ದರಿಂದ ಸಮಿತಿ ರಚನೆ ಕಾರ್ಯ ಬಾಕಿ ಉಳಿದಿತ್ತು.
ಬಿಜೆಪಿಯ ಅಪರಾಜಿತಾ ಸಾರಂಗಿ ಅಧ್ಯಕ್ಷತೆಯಲ್ಲಿ 31 ಸದಸ್ಯರ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಬಿಜೆಪಿಯ 15 ಮಂದಿ ಸೇರಿ ಎನ್‌ಡಿಎನ 26 ಸಂಸದರು, ವಿರೋಧ ಪಕ್ಷಗಳ ನಾಲ್ವರು ಸದಸ್ಯರಿದ್ದಾರೆ. ಕರ್ನಾಟಕದಿಂದ ಸುಧಾಮೂರ್ತಿ ಈ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಜೆಡಿಎಸ್ ಸಂಸದ ಎಂ. ಮಲ್ಲೇಶಬಾಬು ಸಹ ಈ ಸಮಿತಿ ಸದಸ್ಯರು.
ಸುಪ್ರಿಯಾ ಸುಳೆ (ಎನ್‌ಸಿಪಿ –ಎಸ್‌ಪಿ), ಅಕಾಲಿ ದಳದ ಹರ್‌ಸಿಮ್ರತ್ ಕೌರ್, ವೈಎಸ್‌ಆರ್ ಕಾಂಗ್ರೆಸ್‌ನ ಎಸ್. ನಿರಂಜನ ರೆಡ್ಡಿ ಮತ್ತು ಎಐಎಂಐಎಂನ ಅಸಾದುದ್ದೀನ್ ಓವೈಸಿಈ ಸಮಿತಿಯಲ್ಲಿರುವ ವಿರೋಧ ಪಕ್ಷಗಳ ಸಂಸದರು. ಬಿಜೆಡಿ ಮತ್ತು ಬಿಆರ್‌ಎಸ್‌ನ ಸಂಸದರು ಈ ಸಮಿತಿಯಲ್ಲಿ ಇಲ್ಲ.
ಸಮಿತಿಯಲ್ಲಿ ಲೋಕಸಭೆಯ 21, ರಾಜ್ಯಸಭೆಯ 10 ಸದಸ್ಯರು ಇದ್ದಾರೆ. ಮುಂದಿನ ಚಳಿಗಾಲದ ಅಧಿವೇಶನದ ಮೊದಲ ವಾರದ ಕೊನೆಯ ದಿನ ಸಮಿತಿ ವರದಿ ಸಲ್ಲಿಸಲಿದೆ. ಆದರೂ, ವರದಿ ಸಲ್ಲಿಸಲು ನಿಗದಿಪಡಿಸಿರುವ ಗಡುವು ವಿಸ್ತರಣೆಯಾಗುವ ಸಾಧ್ಯತೆಗಳಿವೆ ಇದೆ ಎಂದು ಮೂಲಗಳು ತಿಳಿಸಿವೆ.
ಇಂಡಿಯಾ ಮೈತ್ರಿಕೂಟ, ತೃಣಮೂಲ ಕಾಂಗ್ರೆಸ್, ಎಎಪಿ, ಸಮಾಜವಾದಿ ಪಾರ್ಟಿ ಮತ್ತು ಶಿವಸೇನಾ (ಯುಬಿಟಿ) ಈ ಸಮಿತಿಯನ್ನು ಬಹಿಷ್ಕರಿಸುವುದಾಗಿ ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.