ADVERTISEMENT

ಉಗ್ರಗಾಮಿಯ ಬಂಧನದ ಸ್ಥಳದ ಕುರಿತು ತಪ್ಪು ಮಾಹಿತಿ: ಪತ್ರಕರ್ತನ ಬಂಧನ

‘ದೈನಿಕ್ ಭಾಸ್ಕರ್’ ಪತ್ರಿಕೆಯ ಇಬ್ಬರು ಪತ್ರಕರ್ತರ ವಿರುದ್ಧ ದೂರು ದಾಖಲು

ಪಿಟಿಐ
Published 18 ಸೆಪ್ಟೆಂಬರ್ 2021, 16:40 IST
Last Updated 18 ಸೆಪ್ಟೆಂಬರ್ 2021, 16:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಂಬಾಲ: ಪತ್ರಿಕಾ ಸುದ್ದಿಯೊಂದರಲ್ಲಿ ಭಯೋತ್ಪಾದಕನ ಬಂಧನದ ಸ್ಥಳವನ್ನು ತಪ್ಪಾಗಿ ನಮೂದಿಸಿದ ಕಾರಣಕ್ಕಾಗಿ ಪತ್ರಕರ್ತನೊಬ್ಬನನ್ನು ಬಂಧಿಸಿದ್ದು, ವರದಿಯನ್ನು ಪ್ರಕಟಿಸಿದ ಮತ್ತೊಬ್ಬ ಪತ್ರಕರ್ತನ ವಿರುದ್ಧ ಎಫ್‌ಐಆರ್ ದಾಖಲಾದ ಘಟನೆ ಹರಿಯಾಣದಲ್ಲಿ ನಡೆದಿದೆ.

ಪತ್ರಕರ್ತರ ಬಂಧನ ಮತ್ತು ಎಫ್‌ಐಆರ್ ಅನ್ನು ವಿರೋಧಿಸಿರುವ ಅಲ್ಲಿನ ವಿರೋಧಪಕ್ಷಗಳು ಇದು ಪತ್ರಿಕಾ ಸ್ವಾತಂತ್ರ್ಯವನ್ನು ದಮನಗೊಳಿಸುವಹರಿಯಾಣ ಸರ್ಕಾರದ ಪ್ರಯತ್ನ ಎಂದು ಆರೋಪಿಸಿವೆ.

‘ದೈನಿಕ್ ಭಾಸ್ಕರ್’ನ ವರದಿಗಾರ ಸುನೀಲ್ ಬ್ರಾರ್ ಮತ್ತು ಸುದ್ದಿ ಸಂಪಾದಕ ಸಂದೀಪ್ ಶರ್ಮಾ ಅವರ ವಿರುದ್ದ ಗುರುವಾರ ವಿವಿಧ ಐಪಿಸಿ ಸೆಕ್ಷನ್‌ಗಳಡಿಯಲ್ಲಿ ದೂರು ದಾಖಲಾಗಿದೆ. ಶುಕ್ರವಾರ ಸುನೀಲ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಶರ್ಮಾ ಅವರನ್ನು ವಶಕ್ಕೆ ಪಡೆಯುವ ಪ್ರಯತ್ನ ಜಾರಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಅಂಬಾಲದ ಮರ್ದನ್ ಸಾಹಿಬ್ ಗ್ರಾಮದ ಬಳಿ ಟಿಫಿನ್ ಬಾಕ್ಸ್‌ನಲ್ಲಿ ಬಾಂಬ್ ಇಟ್ಟಿದ್ದ ಆರೋಪದ ಮೇರೆಗೆ ಶಂಕಿತ ಭಯೋತ್ಪಾದಕನೊಬ್ಬನನ್ನು ಬುಧವಾರ ಪಂಜಾಬ್ ಪೊಲೀಸರು ಬಂಧಿಸಿದ್ದರು. ಆದರೆ, ಈ ಕುರಿತು ಮರುದಿನ ‘ದೈನಿಕ್ ಭಾಸ್ಕರ್’ ಪತ್ರಿಕೆಯಲ್ಲಿ ‘ಐಒಸಿಯ ಡಿಪೋ ಕ್ಯಾಂಟೀನ್ ಬಳಿ ಪಂಜಾಬ್ ಪೊಲೀಸರಿಂದ ಭಯೋತ್ಪಾದಕನ ಬಂಧನ’ ಎನ್ನುವ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು. ಸ್ಥಳದ ಮಾಹಿತಿ ತಪ್ಪಾಗಿದ್ದ ಕುರಿತು ಪತ್ರಿಕೆಯು ಮರುದಿನ ತಿದ್ದುಪಡಿಯನ್ನೂ ಪ್ರಕಟಿಸಿತ್ತು.

‘ಈ ಇಬ್ಬರು ಪತ್ರಕರ್ತರು ಯಾವುದೇ ದೃಢೀಕರಣವಿಲ್ಲದೇ ಸುದ್ದಿಯನ್ನು ಪ್ರಕಟಿಸಿದ್ದಾರೆ. ಸುಳ್ಳು ಸುದ್ದಿಯನ್ನು ಪ್ರಕಟಿಸುವ ಮೂಲಕ ಜನರಲ್ಲಿ ಭಯವನ್ನು ಹುಟ್ಟುಹಾಕಿದ್ದಾರೆ. ಹಾಗಾಗಿ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಅಂಬಾಲದ ಠಾಣಾಧಿಕಾರಿ ವಿಜಯ್ ಕುಮಾರ್ ಹೇಳಿದ್ದಾರೆ.

ಈ ಪ್ರಕರಣದ ಕುರಿತು ವಿರೋಧಪಕ್ಷಗಳಾದ ಕಾಂಗ್ರೆಸ್, ಐಎನ್‌ಎಲ್‌ಡಿ, ಹರಿಯಾಣ ಡೆಮಾಕ್ರಟಿಕ್ ಫ್ರಂಟ್, ಬಿಎಸ್‌ಪಿ ಖಂಡನೆ ವ್ಯಕ್ತಪಡಿಸಿವೆ.

ಕಾಂಗ್ರೆಸ್‌ನ ಹಿರಿಯ ನಾಯಕ ರೋಹಿತ್ ಜೈನ್, ‘ಸುಪ್ರೀಂಕೋರ್ಟ್‌ ನಿರ್ದೇಶನದ ವಿರುದ್ಧ ಪತ್ರಕರ್ತನ ಬಂಧನ ಮಾಡಲಾಗಿದೆ. ಅಲ್ಲದೇ ಬಂಧನಕ್ಕೂ ಮುನ್ನ ಈ ಬಗ್ಗೆ ಪತ್ರಕರ್ತನಿಗೆ ಯಾವುದೇ ಪೂರ್ವಸೂಚನೆಯನ್ನೂ ನೀಡಿಲ್ಲ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.