ADVERTISEMENT

ಇಂದೋರ್‌ | ಪತ್ರಕರ್ತನ ಮೇಲೆ ಹಲ್ಲೆ: ಐವರು ವಕೀಲರಿಗೆ ಶಿಕ್ಷೆ

ಪಿಟಿಐ
Published 29 ಆಗಸ್ಟ್ 2025, 14:28 IST
Last Updated 29 ಆಗಸ್ಟ್ 2025, 14:28 IST
   

ಇಂದೋರ್‌: ಪತ್ರಕರ್ತನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಇಲ್ಲಿನ ನ್ಯಾಯಾಲಯವು ಐವರು ವಕೀಲರಿಗೆ ಶಿಕ್ಷೆ ವಿಧಿಸಿದೆ.

ಉಜ್ಜಯಿನಿಯ ವಕೀಲರಾದ ಧರ್ಮೇಂದ್ರ ಶರ್ಮ, ಶೈಲೇಂದ್ರ ಶರ್ಮ, ಭವೇಂದ್ರ ಶರ್ಮ ಹಾಗೂ ಪುರುಷೋತ್ತಮ್‌ ರೈ ಅವರಿಗೆ ಇಂದೋರ್‌ನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕೃಷ್ಣ ಡಾಗ್ಲಿಯಾ ಅವರು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ.

ಮತ್ತೊಬ್ಬ ಆರೋಪಿ ಸುರೇಂದ್ರ ಶರ್ಮಾ (90) ಅವರ ವಯಸ್ಸನ್ನು ಪರಿಗಣಿಸಿ ಮೂರು ವರ್ಷ ಸಾಮಾನ್ಯ ಜೈಲು ಶಿಕ್ಷೆ ವಿಧಿಸಿದ್ದಾರೆ. ಐವರು ಆರೋಪಿಗಳಿಗೂ ತಲಾ ₹10 ಸಾವಿರ ದಂಡ ವಿಧಿಸಲಾಗಿದೆ.

ADVERTISEMENT

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2009ರ ಫೆಬ್ರುವರಿ 10ರಂದು ಸಾಕ್ಷ್ಯ ನುಡಿಯಲು ಪತ್ರಕರ್ತ ಘನಶ್ಯಾಮ್‌ ಪಟೇಲ್‌ ಅವರು ಉಜ್ಜಯಿನಿಯ ನ್ಯಾಯಾಲಯಕ್ಕೆ ಹೋದಾಗ, ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳು ಹಾಗೂ ಆರೋಪಿಗಳೊಂದಿಗೆ ಸೇರಿಕೊಂಡು ಪಟೇಲ್‌ ಮೇಲೆ ಹಲ್ಲೆ ನಡೆಸಿದ್ದರು ಎಂದು ವಕೀಲ ಅಶೋಕ್ ಕುಮಾರ್‌ ಶರ್ಮ ಸುದ್ದಿಗಾರರಿಗೆ ತಿಳಿಸಿದರು.

‘ಆರೋಪಿಗಳು ಪತ್ರಕರ್ತನ ಮೇಲೆ ಹಲ್ಲೆ ನಡೆಸಿ ಆತನ ಬಳಿಯಿದ್ದ ರಿವಾಲ್ವರ್‌, ಚಿನ್ನದ ಸರ ಹಾಗೂ ವಾಚ್‌ ಕಿತ್ತುಕೊಂಡಿದ್ದರು. ಸಾಕ್ಷ್ಯ ನುಡಿದರೆ ಮತ್ತಷ್ಟು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಬೆದರಿಸಿದ್ದರು’ ಎಂದು ವಕೀಲರು ಹೇಳಿದರು.

ಈ ಪ್ರಕರಣದ ವಿಚಾರಣೆಯು ಆರಂಭದಲ್ಲಿ ಉಜ್ಜಯಿನಿಯ ನ್ಯಾಯಾಲಯದಲ್ಲೇ ನಡೆಯುತ್ತಿತ್ತು. ನ್ಯಾಯಯುತ ವಿಚಾರಣೆ ನಡೆಯುವುದಿಲ್ಲ ಎಂಬ ಅನುಮಾನ ವ್ಯಕ್ತಪಡಿಸಿ ಘನಶ್ಯಾಮ್‌ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರಿಂದ, ಪ್ರಕರಣವನ್ನು ಇಂದೋರ್‌ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರಾದ ಡಾಗ್ಲಿಯಾ 120 ಪುಟಗಳ ಆದೇಶ ಬರೆದಿದ್ದು, ‘ಎಲ್ಲರೂ ಕಾನೂನು ಪಾಲಿಸಬೇಕು. ಅದರಲ್ಲೂ ವಕೀಲರು ಮುಂದಿರಬೇಕು. ಆದರೆ ನ್ಯಾಯ ದೇಗುಲದ ಆವರಣದಲ್ಲೇ ಪಟೇಲ್‌ ಅವರ ಕೊಲೆಗೆ ಮುಂದಾಗಿದ್ದಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.