ADVERTISEMENT

ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ 3 ಲಕ್ಷ ಡಾಲರ್ ಕೊಟ್ಟಿದ್ದೇಕೆ?: ನಡ್ಡಾ

ಏಜೆನ್ಸೀಸ್
Published 25 ಜೂನ್ 2020, 13:09 IST
Last Updated 25 ಜೂನ್ 2020, 13:09 IST
ಬಿಜೆಪಿ ಅಧ್ಯಕ್ಷ ನಡ್ಡಾ
ಬಿಜೆಪಿ ಅಧ್ಯಕ್ಷ ನಡ್ಡಾ   

ಭೋಪಾಲ: ಚೀನಾದ ಕಮ್ಯುನಿಸ್ಟ್ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಒಡಂಬಡಿಕೆಯಾಗಿದೆ ಎಂದು ಆರೋಪಿಸಿದ್ದ ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಜೆ.ಪಿ ನಡ್ಡಾ ಅವರು ‘ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ 3 ಲಕ್ಷ ಡಾಲರ್ ಕೊಟ್ಟಿದ್ದೇಕೆ?’ ಎಂದು ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಗುರುವಾರ ನಡೆದ ‘ಮಧ್ಯಪ್ರದೇಶ ಜನಸಂವಾದ ಸಮಾವೇಶ’ದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿ ಅವರ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದಾರೆ.

ADVERTISEMENT

‘‌2017ರಲ್ಲಿ ದೋಕಲಾದಲ್ಲಿ ಘರ್ಷಣೆ ಸಂಭವಿಸಿದಾಗ ರಾಹುಲ್ ಗಾಂಧಿ ದೆಹಲಿಯಲ್ಲಿರುವ ಚೀನಾದ ರಾಯಭಾರಿಯೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸುತ್ತಿದ್ದರು. ಇಂದು, ಗಾಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದಾಗಲೂ ಕಾಂಗ್ರೆಸ್ ದೇಶವನ್ನು ದಿಕ್ಕಿತಪ್ಪಿಸುತ್ತಿದೆ,’ ಎಂದು ಆರೋಪಿಸಿದರು.

‘ರಾಜೀವ್ ಗಾಂಧಿ ಪ್ರತಿಷ್ಠಾನವು 2005-06ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಮತ್ತು ಚೀನೀ ರಾಯಭಾರ ಕಚೇರಿಯಿಂದ 3 ಲಕ್ಷ ಅಮೆರಿಕ ಡಾಲರ್‌ಗಳನ್ನು ಪಡೆದುಕೊಂಡಿದೆ. ಇದು ನನ್ನನ್ನು ಚಕಿತನನ್ನಾಗಿಸಿದೆ. ಇದು ಕಾಂಗ್ರೆಸ್ ಮತ್ತು ಚೀನಾದ ರಹಸ್ಯ ಸಂಬಂಧ,’ ಎಂದು ಅವರು ಹೇಳಿದ್ದಾರೆ.

ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ದೇಶವನ್ನು ವಿಭಜಿಸುವಂತಹ ಹೇಳಿಕೆ ನೀಡುತ್ತಿದ್ದು, ಸಶಸ್ತ್ರ ಪಡೆಗಳ ಸ್ಥೈರ್ಯಗುಂದಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮಂಗಳವಾರ ಆರೋಪಿಸಿದ್ದರು. ಅಲ್ಲದೆ, ‘ರಾಹುಲ್ ಅವರ ಈ ನಡೆಯು ಚೀನಾದ ಕಮ್ಯುನಿಸ್ಟ್ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದ ನಡುವಿನ ಒಡಂಬಡಿಕೆಯ ಪರಿಣಾಮವೇ?’ ಎಂದು ನಡ್ಡಾ ಪ್ರಶ್ನಿಸಿದ್ದರು.

‘ಮೊದಲಿಗೆ ಚೀನಾದ ಕಮ್ಯುನಿಸ್ಟ್ ಪಕ್ಷದ ಜೊತೆ ಕಾಂಗ್ರೆಸ್‌ ಒಪ್ಪಂದಕ್ಕೆ ಸಹಿ ಹಾಕಿತು. ಚೀನಾಕ್ಕೆ ಭಾರತದ ಭೂ ಭಾಗವನ್ನು ಒಪ್ಪಿಸಿತು. ದೋಕಲಾ ವಿಷಯದಲ್ಲಿ ರಾಹುಲ್ ಅವರು ರಹಸ್ಯವಾಗಿ ಚೀನಾ ರಾಯಭಾರ ಕಚೇರಿಗೆ ಭೇಟಿ ನೀಡಿದರು. ಅವರ ಈಗಿನ ಹೇಳಿಕೆಗಳು ಅವರಿಬ್ಬರ ನಡುವಿನ ಒಪ್ಪಂದದ ಫಲವೇ ಇರಬೇಕು’ ಎಂದು ನಡ್ಡಾ ಆರೋಪಿಸಿದ್ದರು.

ಚೀನಾ ಜೊತೆಗಿನ ಗಡಿ ವಿವಾದವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸೂಕ್ತವಾಗಿ ನಿಭಾಯಿಸಲಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ನಿರಂತರವಾಗಿ ಆರೋಪಿಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ನಡ್ಡಾ ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿ ವಿರುದ್ಧ ಕಿಡಿ ಕಾರಿದ್ದಾರೆ.
ಕಳೆದ ವಾರ ಲಡಾಖ್‌ನಲ್ಲಿ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು.

ಇನ್ನಷ್ಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.