ನವದೆಹಲಿ: ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ನಿವಾಸದಲ್ಲಿ ಸುಟ್ಟುಹೋದ ಹಣ ಪತ್ತೆ ಪ್ರಕರಣದಲ್ಲಿ ಎಫ್‌ಐಆರ್ ಏಕೆ ದಾಖಲಿಸಿಲ್ಲ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಪ್ರಶ್ನಿಸಿದ್ದಾರೆ. ಅದು ‘ಕಾನೂನಿಗೆ ಮೀರಿದ ವರ್ಗವೇ?, ವಿಚಾರಣೆಯಿಂದ ವಿನಾಯಿತಿ ಪಡೆದಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಮಾರ್ಚ್ 14ರಂದು ಹೋಳಿ ಹಬ್ಬದ ರಾತ್ರಿ, ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಸಂದರ್ಭ ಅರ್ಧ ಸುಟ್ಟುಹೋದ ಹಣದ ರಾಶಿ ಪತ್ತೆಯಾಗಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್ ಆಂತರಿಕ ತನಿಖೆಗೆ ಆದೇಶಿಸಿದೆ. ನ್ಯಾಯಮೂರ್ತಿ ವರ್ಮಾ ಅವರನ್ನು ಈಗ ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ.
ಈ ವಿಷಯದ ಬಗ್ಗೆ ಆಂತರಿಕ ತನಿಖೆ ನಡೆಸುತ್ತಿರುವ ಮೂವರು ನ್ಯಾಯಮೂರ್ತಿಗಳ ಸಮಿತಿಯ ಕಾನೂನು ಸ್ಥಿತಿಯನ್ನು ಧನಕರ್ ಪ್ರಶ್ನಿಸಿದ್ದಾರೆ.
ಪ್ರಕರಣವನ್ನು ಉಲ್ಲೇಖಿಸಿ, ಪ್ರತಿಯೊಬ್ಬ ಭಾರತೀಯನೂ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಘಟನೆ ಸಾಮಾನ್ಯ ವ್ಯಕ್ತಿಯ ಮನೆಯಲ್ಲಿ ನಡೆದಿದ್ದರೆ, ತನಿಖೆಯ ವೇಗವು ರಾಕೆಟ್ ವೇಗದಲ್ಲಿರುತ್ತಿತ್ತು. ಈಗ ಅದು ಎತ್ತಿನಗಾಡಿಯೂ ಅಲ್ಲ ಎಂದಿದ್ದಾರೆ.
ಮೂವರು ನ್ಯಾಯಾಮೂರ್ತಿಗಳ ಸಮಿತಿಯು ಈ ಪ್ರಕರಣದ ತನಿಖೆ ಮಾಡುತ್ತಿದೆ. ತನಿಖೆಯು ಕಾರ್ಯಾಂಗದ ಕ್ಷೇತ್ರವಾಗಿದೆ, ನ್ಯಾಯಾಂಗದಲ್ಲ ಎಂದು ಧನಕರ್ ಹೇಳಿದ್ದಾರೆ.
ಸಂವಿಧಾನ ಅಥವಾ ಕಾನೂನಿನ ಯಾವುದೇ ನಿಬಂಧನೆಯ ಅಡಿಯಲ್ಲಿ ಸಮಿತಿಯನ್ನು ಸ್ಥಾಪಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಮಿತಿ ಏನು ಮಾಡಬಹುದು? ಹೆಚ್ಚೆಂದರೆ ಶಿಫಾರಸು ಮಾಡಬಹುದು. ಯಾರಿಗೆ ಶಿಫಾರಸು? ಮತ್ತು ಯಾವುದಕ್ಕಾಗಿ? ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ನ್ಯಾಯಮೂರ್ತಿಗಳ ವಿಚಾರದಲ್ಲಿ ಅಂತಿಮವಾಗಿ ಕ್ರಮ ಕೈಗೊಳ್ಳಬಹುದಾದ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ. ಸಮಿತಿಯ ವರದಿಗೆ "ಸ್ವಾಭಾವಿಕವಾಗಿ ಕಾನೂನು ಮಾನ್ಯತೆ ಇಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.