
ನವದೆಹಲಿ: ‘ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಸವಾಲುಗಳನ್ನು ಬೆಂಬಲಿಸಬಾರದು. ಸ್ವತಂತ್ರ ಮತ್ತು ನೇರ ಪತ್ರಿಕೋದ್ಯಮದ ಮೇಲಿನ ನಿರ್ಬಂಧಗಳನ್ನು ಆರಂಭದಲ್ಲೇ ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ‘ಅನುಕೂಲಸಿಂಧು ವರದಿಗಾರಿಕೆ’ಗೆ ಅವಕಾಶ ಇರಬಾರದು’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಅಭಿಪ್ರಾಯಪಟ್ಟರು.
ನವದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ ‘ಪತ್ರಿಕೋದ್ಯಮದಲ್ಲಿನ ಶ್ರೇಷ್ಠತೆಗಾಗಿ ನೀಡುವ ಐಪಿಐ ಇಂಡಿಯಾ ಪ್ರಶಸ್ತಿ– 2025’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪತ್ರಿಕಾ ಸ್ವಾತಂತ್ರ್ಯವು ಮಾರುಕಟ್ಟೆಯ ಆರ್ಥಿಕ ಕಾರ್ಯಸಾಧ್ಯತೆಯನ್ನು ಅವಲಂಬಿಸಿದ್ದರೆ, ಮುಕ್ತ ಮತ್ತು ಸಮತೋಲಿತ ಪತ್ರಿಕೋದ್ಯಮ ಇರುತ್ತದೆಯೇ ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು. ‘ಪತ್ರಿಕೋದ್ಯಮವು ಸರ್ಕಾರದ ಹಿಡಿತದಿಂದ ಮುಕ್ತವಾಗಿದ್ದರೂ ಅದು ಕಾರ್ಪೊರೇಟ್ ಶಕ್ತಿಯನ್ನು ಅವಲಂಬಿಸಿರಬಹುದು, ಈ ಕಾರ್ಪೊರೇಟ್ ಶಕ್ತಿಯು ಸರ್ಕಾರದ ಕೃಪೆಯನ್ನು ಆಶ್ರಯಿಸಿರಬಹುದು’ ಎಂದ ಅವರು, ‘ಈ ವಿಷಯವನ್ನು ಮಾಧ್ಯಮಗಳು ಮತ್ತೊಮ್ಮೆ ಗಂಭೀರವಾಗಿ ಚರ್ಚೆಗೆ ಒಳಪಡಿಸಬೇಕು’ ಎಂದು ಸಲಹೆ ನೀಡಿದರು.
‘ಒಳ್ಳೆಯ ಪತ್ರಿಕೋದ್ಯಮ ಕೇವಲ ಸದಾಶಯದ ಮೇಲೆ ನಡೆಯುವುದಿಲ್ಲ, ಅದು ಚಂದಾದಾರಿಕೆಯನ್ನು ಅವಲಂಬಿಸಿರುತ್ತದೆ. ಚಂದಾದಾರರು ಒಳ್ಳೆಯ ಪತ್ರಿಕೋದ್ಯಮವನ್ನು ಬೆಂಬಲಿಸಬೇಕು. ಸ್ವತಂತ್ರ ವರದಿಗಾರಿಕೆಯು ಪಾವತಿಸಲು ಯೋಗ್ಯವಾದ, ಸಾರ್ವಜನಿಕ ಒಳಿತು ಎನ್ನುವುದನ್ನು ನಾಗರಿಕ ಸಮಾಜ ಗುರುತಿಸಬೇಕು. ಸುಸ್ಥಿರ, ತಳಮಟ್ಟದ ಪತ್ರಿಕೋದ್ಯಮವು ತನ್ನಷ್ಟಕ್ಕೆ ತಾನೇ ಉಳಿಯುವುದಿಲ್ಲ, ಜನರು ಅದನ್ನು ಆಯ್ಕೆ ಮಾಡಿದಾಗ, ಅದರ ಮೌಲ್ಯವನ್ನು ಗುರುತಿಸಿದಾಗ ಮಾತ್ರ ಉಳಿವು ಸಾಧ್ಯ’ ಎಂದು ನ್ಯಾಯಮೂರ್ತಿ ನಾಗರತ್ನಾ ಹೇಳಿದರು.
‘ಸಾಮಾಜಿಕ ಕಾರ್ಯ ನೈತಿಕ ಅಭ್ಯಾಸ‘
‘ಕೆಲವೊಂದು ವಿಷಯವನ್ನು ತಳಮಟ್ಟದಿಂದಲೇ ವರದಿ ಮಾಡಬೇಕಾಗುತ್ತದೆ. ಇದೊಂದು ಸಾಮಾಜಿಕ ಕಾರ್ಯವೂ ಹೌದು. ಹಾಗಾಗಿ ಪತ್ರಿಕಾ ಸ್ವಾತಂತ್ರ್ಯವು ಕೇವಲ ಸಾಂವಿಧಾನಿಕ ಹಕ್ಕು ಮಾತ್ರವಲ್ಲ ಇದು ನೈತಿಕ ಅಭ್ಯಾಸವೂ ಆಗಿದೆ. ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತತೆಯೇ ಇದರ ಕೇಂದ್ರಬಿಂದು’ ಎಂದು ವಿವರಿಸಿದರು.
ಸ್ಕ್ರೋಲ್.ಐ ವರದಿಗಾರ್ತಿ ವೈಷ್ಣವಿ ರಾಥೋಡ್ ಅವರಿಗೆ ಐಪಿಐ ಇಂಡಿಯಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್ ಬಿ. ಲೊಕೂರ್ ನೇತೃತ್ವದ ಸಮಿತಿಯು ವೈಷ್ಣವಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ನಿಕೊಬಾರ್ ದ್ವೀಪ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ತಳಮಟ್ಟದ ವರದಿಗಾಗಿ ಅವರಿಗೆ ಪ್ರಶಸ್ತಿ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.