ADVERTISEMENT

ನ್ಯಾ.ವರ್ಮಾ ಮನೆಯಲ್ಲಿ ಹಣ ಪತ್ತೆ ಘಟನೆ: ವರ್ಗಾವಣೆಗೆ ವಕೀಲರ ವಿರೋಧ; CJIಗೆ ಮನವಿ

ಪಿಟಿಐ
Published 27 ಮಾರ್ಚ್ 2025, 10:19 IST
Last Updated 27 ಮಾರ್ಚ್ 2025, 10:19 IST
<div class="paragraphs"><p>ನವದೆಹಲಿಯ ಸುಪ್ರೀಂ ಕೋರ್ಟ್‌ಗೆ ದೇಶದ ವಿವಿಧ ಹೈಕೋರ್ಟ್‌ಗಳ ವಕೀಲರ ಸಂಘದ ಪದಾಧಿಕಾರಿಗಳು ಗುರುವಾರ ಭೇಟಿ ನೀಡಿದರು</p></div>

ನವದೆಹಲಿಯ ಸುಪ್ರೀಂ ಕೋರ್ಟ್‌ಗೆ ದೇಶದ ವಿವಿಧ ಹೈಕೋರ್ಟ್‌ಗಳ ವಕೀಲರ ಸಂಘದ ಪದಾಧಿಕಾರಿಗಳು ಗುರುವಾರ ಭೇಟಿ ನೀಡಿದರು

   

ಪಿಟಿಐ ಚಿತ್ರ

ನವದೆಹಲಿ: ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಮನೆಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾದ ಅಪಾರ ಪ್ರಮಾಣದ ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಗಾವಣೆ ಆದೇಶವನ್ನು ಮರಳಿ ಪಡೆಯುವ ಬೇಡಿಕೆಯನ್ನು ಪುರಸ್ಕರಿಸಲಾಗುವುದು ಎಂದು ವಕೀಲರ ಸಂಘದ ಮುಖಂಡರಿಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಗುರುವಾರ ಹೇಳಿದ್ದಾರೆ.

ADVERTISEMENT

ಈ ಕುರಿತಂತೆ ಮಾಹಿತಿ ನೀಡಿರುವ ಅಲಹಾಬಾದ್ ಹೈಕೋರ್ಟ್‌ನ ವಕೀಲರ ಸಂಘದ ಅಧ್ಯಕ್ಷ ಅನಿಲ್ ತಿವಾರಿ, ‘ದೇಶದ ಆರು ವಿವಿಧ ಹೈಕೋರ್ಟ್‌ಗಳ ವಕೀಲರ ಸಂಘದ ಮುಖಂಡರೆಲ್ಲರೂ ಸೇರಿ ಮುಖ್ಯ ನ್ಯಾಯಮೂರ್ತಿ ಹಾಗೂ ಕೊಲಿಜಿಯಂ ಸದಸ್ಯರನ್ನು ಭೇಟಿ ಮಾಡಲಾಯಿತು. ನ್ಯಾ. ಬಿ.ಆರ್. ಗವಾಯಿ, ನ್ಯಾ. ಸೂರ್ಯ ಕಾಂತ್, ನ್ಯಾ. ಅಭಯ್ ಎಸ್. ಒಕಾ ಹಾಗೂ ನ್ಯಾ. ವಿಕ್ರಂ ನಾಥ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಈ ಘಟನೆ ನಂತರ ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಿದ ಆದೇಶವನ್ನು ಮರಳಿ ಪಡೆಯುವಂತೆ ವಕೀಲರ ಸಂಘದ ಸದಸ್ಯರು ಮಾರ್ಚ್ 25ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಅಲಹಾಬಾದ್, ಗುಜರಾತ್, ಕೇರಳ, ಜಬಲ್‌ಪುರ, ಕರ್ನಾಟಕ ಹಾಗೂ ಲಖನೌ ಹೈಕೋರ್ಟ್‌ಗಳ ವಕೀಲರ ಸಂಘದ ಮುಖಂಡರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ.

ಮಾರ್ಚ್ 14ರಂದು ವರ್ಮಾ ಅವರ ಮನೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಸಂದರ್ಭದಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದ್ದು ಸುದ್ದಿಯಾಗಿತ್ತು. ಈ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಿದ ಹಾಗೂ ಪ್ರಕರಣ ದಾಖಲಿಸದ ಕುರಿತು ವಕೀಲರ ಸಂಘದ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.

‘ನ್ಯಾ. ವರ್ಮಾ ಅವರ ವರ್ಗಾವಣೆ ಆದೇಶವನ್ನು ರದ್ದುಪಡಿಸಬೇಕು. ಈಗಾಗಲೇ ಅವರಿಗೆ ಹಂಚಿಕೆಯಾಗಿದ್ದ ನ್ಯಾಯಾಂಗ ಕೆಲಸವನ್ನು ಹಿಂಪಡೆಯಲಾಗಿದ್ದು, ಆಡಳಿತಾತ್ಮಕ ಜವಾಬ್ದಾರಿಯನ್ನೂ ಹಿಂಪಡೆಯಬೇಕು. ಘಟನೆ ಕುರಿತು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.