ನವದೆಹಲಿ: ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದ ಆರೋಪದ ಮೇಲೆ ನಾಲ್ವರು ಬಾಲಾಪರಾಧಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 22 ರಂದು ಗಾಜಿಪುರದ ಮೊಮೊ ಸ್ಟಾಲ್ ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಸಂತ್ರಸ್ತನ ಎದೆಯ ಬಲಭಾಗದ ಮೇಲೆ ಚಾಕುವಿನಿಂದ ಇರಿಯಲಾಗಿದೆ. ಗಾಯಾಳುವನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಘಟನೆಯ ಬಳಿಕ ನಾಲ್ವರು ಬಾಲಕರು ಪರಾರಿಯಾಗುತ್ತಿರುವುದು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಕಲ್ಯಾಣಪುರಿಯಲ್ಲಿ ಓರ್ವ ಶಂಕಿತನನ್ನು ಬಂಧಿಸಿದ್ದರು. ವಿಚಾರಣೆಯ ವೇಳೆ ಆತ ಇತರ ಮೂವರು ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದಾನೆ. ಬಳಿಕ ಅವರೆಲ್ಲರನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.