
ಹೈದರಾಬಾದ್: ಮುಂಬರಲಿರುವ ವಿಧಾನಸಭೆ ಚುನಾವಣೆ ವೇಳೆಗೆ ಹೊಸ ಪಕ್ಷ ರಚಿಸುವುದಾಗಿ ಬಿಆರ್‌ಎಸ್ ಮುಖ್ಯಸ್ಥ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ, ಕೆ.ಕವಿತಾ ಅವರು ಸೋಮವಾರ ಘೋಷಿಸಿದ್ದಾರೆ.
ತೆಲಂಗಾಣ ಹುತಾತ್ಮರ ಸ್ಮಾರಕದಲ್ಲಿ ಈ ಬಗ್ಗೆ ಮಾತನಾಡಿದ ಅವರು, ತಮ್ಮ ಸಂಸ್ಥೆ ತೆಲಂಗಾಣ ಜಾಗೃತಿಯು ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ರಾಜಕೀಯ ಪಕ್ಷವಾಗಿ ಬೆಳೆದು, ತೆಲಂಗಾಣದ ಜನರ ಪರವಾಗಿ ಹೋರಾಟ ನಡೆಸಲು ಸಿದ್ಧವಾಗಿರುತ್ತದೆ ಎಂದಿದ್ದಾರೆ.
ಅಲ್ಲದೇ, ‘ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ರಾಜಕೀಯ ಪಕ್ಷವೊಂದು ಕಾರ್ಯನಿರ್ವಹಿಸಬೇಕು ಎಂದು ಬಯಸುವವರು, ಎಡಪಕ್ಷಗಳ ಸಹೋದರರು ನನಗೆ ಬೆಂಬಲ ನೀಡಿ’ ಎಂದೂ ಕವಿತಾ ಮನವಿ ಮಾಡಿದ್ದಾರೆ.
ಇದೇ ವೇಳೆ, ‘ತೆಲಂಗಾಣಕ್ಕಾಗಿ ಹೋರಾಡಿದ ಲಕ್ಷಾಂತರ ಕಾರ್ಯಕರ್ತರಿಗೆ ಟಿಆರ್‌ಎಸ್‌ನಲ್ಲಿ ಗೌರವ ಸಿಗಲಿಲ್ಲ. ಹಲವು ಹುದ್ದೆಗಳು ಇದ್ದರೂ ಅವರಿಗೆ ನೀಡಲಿಲ್ಲ. ತೆಲಂಗಾಣ ಚಳಿವಳಿಯಲ್ಲಿ ಭಾಗಿಯಾದ ಮಹಿಳೆಯರಿಗೂ ಯಾವುದೇ ಅವಕಾಶ ಸಿಗಲಿಲ್ಲ’ ಎಂದೂ ದೂರಿದ್ದಾರೆ.
ಭಾವುಕರಾದ ಕವಿತಾ: ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಿಆರ್‌ಎಸ್‌ನಿಂದ ಬೇರಾಗುತ್ತಿರುವುದಾಗಿ ಪರಿಷತ್‌ನಲ್ಲಿ ತಿಳಿಸಿದ ಕವಿತಾ, ಅಲ್ಲಿಯೇ ವಿದಾಯ ಭಾಷಣವನ್ನೂ ಮಾಡಿ ಭಾವುಕರಾಗಿದ್ದರು.
‘ಬಿಆರ್‌ಎಸ್ ಜತೆಗಿನ ನನ್ನ ಹೋರಾಟವನ್ನು ಆಸ್ತಿಗಾಗಿ ನಡೆಯುತ್ತಿರುವ ಜಟಾಪಟಿ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ, ದೇವರು ಮತ್ತು ನನ್ನ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ನನ್ನ ಹೋರಾಟ ಆಸ್ತಿಗಾಗಿ ಅಲ್ಲ. ಸ್ವಾಭಿಮಾನಕ್ಕಾಗಿ’ ಎಂದೂ ಕವಿತಾ ಹೇಳಿದ್ದಾರೆ.
‘ಜತೆಗೆ ಸಾಂವಿಧಾನಿಕ ಮನೋಭಾವವಿಲ್ಲದೇ, ಯಾವ ಸೂಚನೆಯನ್ನೂ ನೀಡದೇ ನನ್ನನ್ನು ಅಮಾನತುಗೊಳಿಸಲು ಬಿಆರ್‌ಎಸ್ ರಾತ್ರೋರಾತ್ರಿ ಶಿಸ್ತು ಸಮಿತಿ ರಚಿಸಿತು. ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪಕ್ಷದಲ್ಲಿ ಹತ್ತಿಕ್ಕಲಾಗಿತ್ತು’ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.