ADVERTISEMENT

ಕಾಳಿ ಹುಲಿ ಮೀಸಲಿನಲ್ಲಿ ಅನಧಿಕೃತ ಪ್ರವಾಸೋದ್ಯಮಕ್ಕೆ ಅವಕಾಶ: ಕೇಂದ್ರಕ್ಕೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 11:13 IST
Last Updated 12 ಡಿಸೆಂಬರ್ 2024, 11:13 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ‘ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಮೀಸಲು ಅರಣ್ಯದ ನೀಲಿಗುಂಡಿ ಜಲಪಾತದಲ್ಲಿ (ಬ್ಲೂ ವಾಟರ್‌ ಫಾಲ್ಸ್‌) ಅನಧಿಕೃತ ಪ್ರವಾಸೋದ್ಯಮಕ್ಕೆ ಅವಕಾಶ ನೀಡಿದ ಅರಣ್ಯಾಧಿಕಾರಿಗಳ ವಿರುದ್ಧ 60 ದಿನಗಳ ಒಳಗಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ದಾಂಡೇಲಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಲಾಗುವುದು’ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ರಾಜ್ಯ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಕಾಳಿ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕರಿಗೆ ವನ್ಯಜೀವಿ ಕಾಯ್ದೆ 1972 ಸೆಕ್ಷನ್ 55 ಸಿ ಅಡಿ ಕೊಪ್ಪಳದ ಹಣಮಂತ್ ಎಂಬುವವರು ನೋಟೀಸ್ ನೀಡಿದ್ದಾರೆ.

ಅಂದಿನ ಹುಲಿ ಯೋಜನೆ ನಿರ್ದೇಶಕ ಹಾಗೂ ಪ್ರಸ್ತುತ ಬೆಳಗಾವಿ ಡಿಸಿಎಫ್ ಆಗಿರುವ ಮರಿಯಾ ಕ್ರಿಸ್ತು ರಾಜ, ಅಣಶಿ ವನ್ಯಜೀವಿ ಉಪ ವಿಭಾಗದ ಅಂದಿನ ಎಸಿಎಫ್ ಅಮರಾಕ್ಷರ, ಶಿವಾನಂದ್ ತೋಡ್ಕರ್, ಅಣಶಿ ವನ್ಯಜೀವಿ ವಲಯದ ಅಂದಿನ ವಲಯ ಅರಣ್ಯ ಅಧಿಕಾರಿಗಳಾದ ಮಹಾಂತೇಶ್ ಪಾಟೀಲ್, ಪ್ರಕಾಶ್ ದೊಡ್ಡಮನಿ ಅವರು ಅನಧಿಕೃತ ಪ್ರವಾಸೋದ್ಯಮ ನಡೆಸಲು ಕಾರಣೀಭೂತರಾಗಿದ್ದಾರೆ. ವನ್ಯಜೀವಿ ಕಾಯ್ದೆ ಉಲ್ಲಂಘನೆ ಮಾಡಿದ್ದಕ್ಕಾಗಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೋಟೀಸಿನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಹುಲಿ ಯೋಜನೆ ಹೆಸರಿನಲ್ಲಿ ಗ್ರಾಮಗಳ ಜನರಿಗೆ ರಸ್ತೆ, ವಿದ್ಯುತ್ ಮುಂತಾದ ಮೂಲಸೌಲಭ್ಯಕ್ಕೆ ನಿರಾಕರಿಸಿ ಅರಣ್ಯ ವಾಸಿಗಳನ್ನು ಪುನರ್ವಸತಿ ಹೆಸರಿನಲ್ಲಿ ಕಾಡಿನಾಚೆ ಸ್ಥಳಾಂತರಿಸಲಾಗುತ್ತಿದೆ. ಆದರೆ, ಮತ್ತೊಂದೆಡೆ ನಗರವಾಸಿಗಳ ಮೋಜುಮಸ್ತಿಗೆ ಹುಲಿ ಕಾಡಿನಲ್ಲಿ ಬೇಕಾಬಿಟ್ಟಿ ಅವಕಾಶ ಕಲ್ಪಿಸಲಾಗಿದ್ದು ಇದು ಇಬ್ಬಗೆಯ ನೀತಿ ಎಂದು ಆರೋಪಿಸಲಾಗಿದೆ. ‘ಪ್ರಜಾವಾಣಿ’ ವರದಿ ಹಾಗೂ ವಿಡಿಯೋ ಸೇರಿದಂತೆ ಪುರಾವೆಗಳನ್ನು ನೋಟೀಸಿನ ಜೊತೆಗೆ ಲಗತ್ತಿಸಲಾಗಿದೆ.

ನೀಲಿಗುಂಡಿ ಜಲಪಾತ ಅಣಶಿ- ಕದ್ರಾ ಮುಖ್ಯ ರಸ್ತೆಯ ತೀರಾ ಹತ್ತಿರದಲ್ಲಿದ್ದು ಕಾಳಿ ಹುಲಿ ಯೋಜನೆಯ ಅಣಶಿ ವನ್ಯಜೀವಿ ವಲಯದಲ್ಲಿದ್ದು ಕೋರ್ ಪ್ರದೇಶದಲ್ಲಿದೆ. ಇಲ್ಲಿ ಪ್ರವಾಸೋದ್ಯಮ ಮಾಡುವ ಬಗ್ಗೆ ಹುಲಿ ಸಂರಕ್ಷಣಾ ಯೋಜನೆಯಲ್ಲಿ ಉಲ್ಲೇಖವೇ ಇಲ್ಲ. ಇಲ್ಲಿ ಸಾವಿರಾರು ಜನರು ಭೇಟಿ ನೀಡಿದ್ದು ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಹತ್ತಿರದಲ್ಲೇ ಬರ್ಪಾಲಿ ಕಳ್ಳ ಬೇಟೆ ತಡೆ ಶಿಬಿರ ಇದೆ. ಜಲಪಾತಕ್ಕೆ ಅಕ್ರಮ ಪ್ರವೇಶ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದು ಅರಣ್ಯ ಇಲಾಖೆ ಕರ್ತವ್ಯ. ಆದರೆ, ಅರಣ್ಯ ಇಲಾಖೆಯೇ ಮುಖ್ಯ ರಸ್ತೆಯ ಬದಿಯಲ್ಲಿ ನೀಲಿ ಜಲಪಾತ ಎಂಬ ನಾಮಫಲಕ ಅಳವಡಿಸಿ, ಅರಣ್ಯ ವೀಕ್ಷಕರನ್ನು ನೇಮಿಸಿ ಜಲಪಾತಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರಿಂದ ಟಿಕೆಟ್ ಶುಲ್ಕ ಸಂಗ್ರಹ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಜಲಪಾತ ಪ್ರದೇಶದಲ್ಲಿ ಈಜಾಡಲು ಸಹ ಅವಕಾಶ ಇದೆ ಎಂದು ಪ್ರವಾಸೋದ್ಯಮ ಉತ್ತೇಜಿಸುವ ವಿಡಿಯೋ ಒಂದನ್ನು ಕಾಳಿ ಹುಲಿ ಯೋಜನೆಯ ಅಧಿಕೃತ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಪ್ರಚಾರ ಮಾಡಲಾಗಿತ್ತು. ಪ್ರಕರಣ ಬೆಳಕಿಗೆ ಬಂದ ನಂತರ ವಿಡಿಯೋ ಅನ್ನು ಅಳಿಸಿ ಹಾಕಲಾಗಿತ್ತು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.