ADVERTISEMENT

ಕುಟುಂಬಗಳನ್ನು ಹಾಳು ಮಾಡುವುದೇ ಕಮಲ ಹಾಸನ್ ಕೆಲಸ: ಪಳನಿಸ್ವಾಮಿ ಟೀಕೆ

ಪಿಟಿಐ
Published 18 ಡಿಸೆಂಬರ್ 2020, 2:04 IST
Last Updated 18 ಡಿಸೆಂಬರ್ 2020, 2:04 IST
ಕೆ.ಪಳನಿಸ್ವಾಮಿ (ಪಿಟಿಐ ಚಿತ್ರ)
ಕೆ.ಪಳನಿಸ್ವಾಮಿ (ಪಿಟಿಐ ಚಿತ್ರ)   

ಚೆನ್ನೈ: ‘ಮಕ್ಕಳ್‌ ನೀದಿಮಯಂ (ಎಂಎನ್‌ಎಂ) ಪಕ್ಷದ ಸ್ಥಾಪಕ ಕಮಲ್ ಹಾಸನ್ ಅವರು ಜನರಿಗೆ ಒಳ್ಳೆಯದು ಮಾಡಲಾರರು. ಕುಟುಂಬಗಳನ್ನು ಹಾಳು ಮಾಡುವುದೇ ಅವರ ಕೆಲಸ’ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಟೀಕಿಸಿದ್ದಾರೆ. ರಿಯಾಲಿಟಿ ಶೋ ‘ಬಿಗ್ ಬಾಸ್’ ಉಲ್ಲೇಖಿಸಿ ಕಮಲ್ ಅವರನ್ನು ಪಳನಿಸ್ವಾಮಿ ಈ ರೀತಿ ಟೀಕಿಸಿದ್ದಾರೆ.

ಕಮಲ್ ಅವರು ಆಡಳಿತ ಪಕ್ಷ ಎಐಎಡಿಎಂಕೆ ಸ್ಥಾಪಕ, ಮಾಜಿ ಮುಖ್ಯಮಂತ್ರಿ ದಿ. ಎಂ.ಜಿ. ರಾಮಚಂದ್ರನ್ ಅವರ ಪರಂಪರೆಯ ಬಗ್ಗೆ ಪ್ರಸ್ತಾಪಿಸಿದ ಹಾಗೂ ಸರ್ಕಾರವನ್ನು ಟೀಕಿಸಿದ ಬೆನ್ನಲ್ಲೇ ಪಳನಿಸ್ವಾಮಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ರಾಮಚಂದ್ರನ್ ಅವರಿಂದ ಸ್ಥಾಪಿತವಾಗಿರುವ ಎಐಎಡಿಎಂಕೆ ಮಾತ್ರವೇ ಅವರ ಪರಂಪರೆಗೆ ಹಕ್ಕುದಾರ ಎಂದು ಪ್ರತಿಪಾದಿಸಿರುವ ಪಳನಿಸ್ವಾಮಿ, ಹಾಸನ್ ಅವರು ಬೇರೊಬ್ಬರ ಮಗುವಿಗೆ ನಾಮಕರಣ ಮಾಡಬಹುದೇ ಎಂದು ಪ್ರಶ್ನಿಸಿದ್ದಾರೆ.

ಕಮಲ್ ತಿರುಗೇಟು: ಮುಖ್ಯಮಂತ್ರಿಗಳ ಹೇಳಿಕೆಗೆ ಕಮಲ್ ಹಾಸನ್ ಅವರೂ ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿಯವರೂ ರಿಯಾಲಿಟಿ ಶೋವನ್ನು ನೋಡಿದ್ದಾರೆಂದರೆ ಬಹಳ ಸಂತೋಷ ಎಂದು ಅವರು ಹೇಳಿದ್ದಾರೆ. ಕಮಲ್ ಅವರು ರಾಜಕೀಯ ಪಕ್ಷ ಸ್ಥಾಪಿಸಿರುವ ಬಗ್ಗೆ ಉಲ್ಲೇಖಿಸಿದ್ದ ಪಳನಿಸ್ವಾಮಿ ಅವರು, ‘ಅವರಿಗೆ (ಕಮಲ್ ಹಾಸನ್) ರಾಜಕೀಯದ ಬಗ್ಗೆ ಏನು ಗೊತ್ತು? ಅವರು ಬಿಗ್ ಬಾಸ್ ನಡೆಸುತ್ತಾರೆ. ಅವುಗಳನ್ನು ನೋಡಿದರೆ ಮಕ್ಕಳು ಮಾತ್ರವಲ್ಲ, ಕುಟುಂಬಗಳೇ ಹಾಳಾಗುತ್ತವೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.