ಚೆನ್ನೈ: ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿರುವುದು ಎಂಬ ತಮ್ಮ ಹೇಳಿಕೆಯಿಂದ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ನಟ ಕಮಲ್ ಹಾಸನ್ ಅವರನ್ನು ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬುಧವಾರ ಬೆಂಬಲಿಸಿದ್ದಾರೆ.
‘ನಟ ಕಮಲ್ ಹಾಸನ್ ಅವರು ವಾಸ್ತವಿಕ ಸಂಗತಿಯನ್ನೇ ಹೇಳಿದ್ದಾರೆ. ಆದರೆ, ಸತ್ಯವನ್ನು ಸ್ವೀಕರಿಸುವುದು ಯಾವಾಗಲೂ ಕಷ್ಟವಾಗುತ್ತದೆ’ ಎಂದು ರಾಜಕೀಯ ಮುಖಂಡರು ಹೇಳಿದ್ದಾರೆ.
‘ಕನ್ನಡ, ಮಲಯಾಳ ಹಾಗೂ ತೆಲುಗು ಸೇರಿದಂತೆ ಎಲ್ಲ ದ್ರಾವಿಡ ಭಾಷೆಗಳ ತಾಯಿ ತಮಿಳು ಎಂಬ ಸಂಗತಿಯನ್ನು ಹಲವು ವಿದ್ವಾಂಸರು ಒಪ್ಪಿದ್ದಾರೆ’ ಎಂದು ವಿಸಿಕೆ ಪಕ್ಷದ ಮುಖ್ಯಸ್ಥ ಟಿ.ತಿರುಮಾವಲವನ್ ಹಾಗೂ ಎನ್‌ಟಿಕೆ ಪಕ್ಷದ ಸಮನ್ವಯಕಾರ ಎಸ್.ಸೀಮಾನ್ ಹೇಳಿದ್ದಾರೆ.
‘ತಮಿಳು, ಹಲವು ದ್ರಾವಿಡ ಭಾಷೆಗಳ ತಾಯಿ ಎಂಬುದನ್ನು ಹಲವು ಭಾಷಾವಿಜ್ಞಾನಿಗಳು ಹಾಗೂ ತಜ್ಞರು ಪುರಾವೆ ಸಹಿತ ಹೇಳಿದ್ದಾರೆ. ಬ್ರಿಟನ್‌ನ ಧರ್ಮ ಪ್ರಚಾರಕ ಹಾಗೂ ಭಾಷಾತಜ್ಞ ರಾಬರ್ಟ್ ಕಾಲ್ಡ್‌ವೆಲ್ ಕೂಡ ಈ ಮಾತನ್ನು ದೃಢೀಕರಿಸಿದ್ದಾರೆ. ರಾಬರ್ಟ್ ಅವರು ದಕ್ಷಿಣ ಭಾರತ ಭಾಷೆಗಳ ವ್ಯಾಕರಣ ಕುರಿತ ತೌಲನಿಕ ಅಧ್ಯಯನ ನಡೆಸಿ, ಕೃತಿ ರಚಿಸಿದ್ದಾರೆ’ ಎಂದು ತಿರುಮಾವಲವನ್ ಹೇಳಿದ್ದಾರೆ.
‘ಸಂಸ್ಕೃತ ತನ್ನ ಮೇಲೆ ಪ್ರಭಾವ ಬೀರುವುದಕ್ಕೆ ಅವಕಾಶ ಮಾಡಿಕೊಟ್ಟ ಮೊದಲ ಭಾಷೆಯೇ ಕನ್ನಡ. ಹೀಗಾಗಿ, ತಮಿಳು ತಮ್ಮ ಭಾಷೆಯ ತಾಯಿ ಎಂಬುದನ್ನು ಒಪ್ಪಿಕೊಳ್ಳಲು ಕನ್ನಡಿಗರಿಗೆ ಕಷ್ಟವಾಗುತ್ತದೆ’ ಎಂದು ಎಸ್.ಸೀಮನ್ ಹೇಳಿದ್ದಾರೆ.
ಕಮಲ್ ಹಾಸನ್ ಹೇಳಿಕೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಹಾಸ್ಯಾಸ್ಪದ. ಒಬ್ಬರ ವಿರುದ್ಧ ಪ್ರತಿಭಟಿಸುವ ಮೊದಲು ಇತಿಹಾಸ ತಿಳಿದುಕೊಳ್ಳಬೇಕು–ಎಸ್.ಸೀಮನ್, ಎನ್‌ಟಿಕೆ ಪಕ್ಷದ ಸಮನ್ವಯಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.