ADVERTISEMENT

ಕಮಲನಾಥ್–ಸಿಂಧಿಯಾ ಬಹಿರಂಗ ಸಂಘರ್ಷ

ಪಶ್ಚಿಮ ಬಂಗಾಳ ಕಾಂಗ್ರೆಸ್‌ನಲ್ಲೂ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 20:53 IST
Last Updated 15 ಫೆಬ್ರುವರಿ 2020, 20:53 IST
ಕಮಲನಾಥ್ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ
ಕಮಲನಾಥ್ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ   

ನವದೆಹಲಿ/ಕೋಲ್ಕತ್ತ: ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳ ಕಾಂಗ್ರೆಸ್‌ನ ಒಳ ಬೇಗುದಿ ಬಹಿರಂಗಗೊಂಡಿದ್ದು, ಕಾಂಗ್ರೆಸ್‌ಗೆ ಇರಿಸು ಮುರಿಸು ತರಿಸಿವೆ. ಮಧ್ಯಪ್ರದೇಶಮುಖ್ಯಮಂತ್ರಿ ಕಮಲನಾಥ್, ಹಾಗೂ ಪಕ್ಷದ ಹಿರಿಯ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ನಡುವೆ ಬಹಿರಂಗ ವಕ್ಸಮರ ನಡೆದಿದೆ.

ಅತ್ತ ಬಂಗಾಳದಲ್ಲಿ ಪ್ರತಿಪಕ್ಷದ ನಾಯಕ ಅಬ್ದುಲ್ ಮನ್ನನ್ ಅವರು ಕೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಫೇಸ್‌ಬುಕ್‌ನಲ್ಲಿ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ.

2018ರ ಪಕ್ಷದ ಚುನಾವಣಾ ಪ್ರಣಾಳಿಕೆಯ ಅಂಶಗಳನ್ನು ಈಡೇರಿಸದಿದ್ದರೆ ಬೀದಿಗಿಳಿಯಬೇಕಾಗುತ್ತದೆ ಎಂದು ತಮ್ಮದೇ ಪಕ್ಷದ ಸರ್ಕಾರಕ್ಕೆ ಸಿಂಧಿಯಾ ಕಳೆದ ವಾರ ಎಚ್ಚರಿಕೆ ನೀಡಿದ್ದರು. ಸಿಂಧಿಯಾ ಮಾತಿಗೆ ಮುಖ್ಯಮಂತ್ರಿ ಕಮಲನಾಥ್ಶನಿವಾರ ತಿರುಗೇಟು ನೀಡಿದ್ದಾರೆ. ‘ಅವರು ಹಾಗೆಯೇ ಮಾಡಿಕೊಳ್ಳಲಿ ಬಿಡಿ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.

ADVERTISEMENT

ಭರವಸೆ ನೀಡಿದಂತೆ ರೈತರ ಸಾಲಮನ್ನಾ ಹಾಗೂ ರಾಜ್ಯದ ಅತಿಥಿ ಶಿಕ್ಷಕರ ವಿಷಯಗಳನ್ನು ಸಿಂಧಿಯಾ ಪ್ರಸ್ತಾಪಿಸಿದ್ದರು.

ಕಮಲನಾಥ್ ಹಾಗೂ ಸಿಂಧಿಯಾ ನಡುವಿನ ಸಂಘರ್ಷವನ್ನು ತಣಿಸುವ ಸಲುವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪಕ್ ಬಾಬರಿಯಾ ಅವರು ಶನಿವಾರ ಸಮನ್ವಯ ಸಮಿತಿ ಸಭೆ ನಡೆಸಿದರು. ಕಮಲನಾಥ್, ಸಿಂಧಿಯಾ ಜತೆಗೆ ಪಕ್ಷದ ಮುಖಂಡ ದಿಗ್ವಿಜಯ ಸಿಂಗ್, ಸಚಿವರಾದ ಜಿತು ಪಟ್ವಾರಿ, ಮೀನಾಕ್ಷಿ ನಟರಾಜನ್ ಅವರು ಸಭೆಯಲ್ಲಿದ್ದರು.

ರಾಜ್ಯದ ಬೊಕ್ಕಸದ ಸೂಕ್ಷ್ಮ ಸ್ಥಿತಿಯನ್ನು ಸಭೆಗೆ ಮನವರಿಕೆ ಮಾಡಿಕೊಟ್ಟ ಕಮಲನಾಥ್ ಅವರು, ಐದು ವರ್ಷದೊಳಗೆ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದರು ಎಂದು ಮೂಲಗಳು ಮಾಹಿತಿ ನೀಡಿವೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಜತೆ ಪ್ರತ್ಯೇಕ ಸಭೆ ನಡೆಸಿದ ಕಮಲನಾಥ್, ರಾಜ್ಯದ ರಾಜಕೀಯ ಸ್ಥಿತಿಯನ್ನು ಅವರಿಗೆ ವಿವರಿಸಿದರು. ಮುಂಬರುವ ಎಐಸಿಸಿ ಸಭೆಯಲ್ಲಿ ಮಧ್ಯಪ್ರದೇಶದಲ್ಲಿ ಆಯೋಜಿಸುವಂತೆ ಸೋನಿಯಾ ಅವರಿಗೆ ಮುಖ್ಯಮಂತ್ರಿ ಮನವಿ ಮಾಡಿದರು.

2018ರ ವಿಧಾನಸಭಾ ಚುನಾವಣೆ ಬಳಿಕ ಮುಖ್ಯಮಂತ್ರಿ ಹುದ್ದೆ ಕಡೆಗಣಿಸಿದ್ದರಿಂದ ಸಿಂಧಿಯಾ ಅಸಮಾಧಾನಗೊಂಡಿದ್ದಾರೆ. ಮಹತ್ವದ ಹುದ್ದೆಯಿಂದ ಸಿಂಧಿಯಾ ಅವರನ್ನು ಹೊರಗಿಡಲು ಕಮಲನಾಥ್ ಅವರು ದಿಗ್ವಿಜಯ ಸಿಂಗ್ ಜತೆ ಕೈಜೋಡಿಸಿದ್ದರು ಎಂಬ ಮಾತು ಪಕ್ಷದ ವಲಯದಲ್ಲಿದೆ.

ಗ್ವಾಲಿಯರ್ ರಾಜವಂಶದ ಭದ್ರನೆಲೆ ಎನಿಸಿದ್ದ ಗುಣ ಲೋಕಸಭಾ ಕ್ಷೇತ್ರದಲ್ಲಿ ಸಿಂಧಿಯಾ ಸೋಲುಂಡಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ತೊರೆದಿರುವ ಅವರು, ರಾಜ್ಯಸಭಾ ಸ್ಥಾನ ಅಥವಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.

ಬಂಗಾಳ ಕಾಂಗ್ರೆಸ್‌ನಲ್ಲಿ ಅತೃಪ್ತಿ
ಪಶ್ಚಿಮ ಬಂಗಾಳ ವಿಧಾನಸಭೆ ಪ್ರತಿಪಕ್ಷದ ನಾಯಕ ಅಬ್ದುಲ್ ಮನ್ನನ್ ಅವರು ಕೇಂದ್ರ ಹಾಗೂ ರಾಜ್ಯ ನಾಯಕರನ್ನು ಟೀಕಿಸಿದ್ದಾರೆ. ‘ರಾಜ್ಯದ ಕೆಲವು ಅಸಮರ್ಥ ಮುಖಂಡರು ಕೇಂದ್ರದ ಕೆಲವು ಮುಖಂಡರ ಮೂಲಕ ಲಾಬಿ ನಡೆಸಿ ಆಯಕಟ್ಟಿನ ಜಾಗಗಳನ್ನು ಪಡೆದುಕೊಂಡಿದ್ದಾರೆ’ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ರಾಜ್ಯ ಕಾಂಗ್ರೆಸ್ ಘಟಕದ ಚುಕ್ಕಾಣಿ ಹಿಡಿಯಲು ಬಯಸಿರುವ ಕಾರಣದಿಂದಮನ್ನನ್ ಅವರು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.