ADVERTISEMENT

ವಲಸಿಗರ ವಿರುದ್ಧ ಹರಿಹಾಯ್ದ ಕಮಲನಾಥ್‌

ಸ್ಥಳೀಯರಿಗೆ ಉದ್ಯೋಗ ನೀಡುವ ಕೈಗಾರಿಕೆಗಳಿಗೆ ಉತ್ತೇಜನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 19:37 IST
Last Updated 18 ಡಿಸೆಂಬರ್ 2018, 19:37 IST
ಕಮಲನಾಥ್‌
ಕಮಲನಾಥ್‌   

ನವದೆಹಲಿ: ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕಮಲನಾಥ್‌ ಸೋಮವಾರ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ವಿವಾದಗಳು ಅವರ ಬೆನ್ನು ಬಿದ್ದಿವೆ.

ಮಧ್ಯಪ್ರದೇಶದಲ್ಲಿ ಹೆಚ್ಚಿನ ಕೈಗಾರಿಕೆಗಳಿದ್ದರೂ ಉದ್ಯೋಗ ಮಾತ್ರ ನೆರೆ ರಾಜ್ಯಗಳ ವಲಸಿಗರ ಪಾಲಾಗುತ್ತಿವೆ ಎಂದು ಅವರು ಹರಿಹಾಯ್ದಿರುವುದು ವಿವಾದವಾಗಿದೆ.

ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಹೊರ ರಾಜ್ಯಗಳಿಂದ ವಲಸೆ ಬಂದಿರುವ ಜನರು ಸ್ಥಳೀಯರ ಉದ್ಯೋಗ ಕಿತ್ತುಕೊಂಡಿದ್ದಾರೆ. ಸ್ಥಳೀಯರಿಗೆ ಶೇ70 ರಷ್ಟು ಉದ್ಯೋಗ ಮೀಸಲಿಡುವ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದಾಗಿ ಕಮಲನಾಥ್‌ ಪ್ರಕಟಿಸಿದ್ದಾರೆ.

ADVERTISEMENT

ಇದೊಂದು ವಿಭಜನೆಯ ತಂತ್ರ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ನಾಯಕರು ‘ಕಮಲನಾಥ್‌ ಕೂಡ ವಲಸಿಗರು’ ಎಂದು ತಿರುಗೇಟು ನೀಡಿದ್ದಾರೆ.

‘ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿರುವ ಕಮಲನಾಥ್‌, ಡೆಹ್ರಾಡೂನ್‌ ಮತ್ತು ಕೋಲ್ಕತ್ತದಲ್ಲಿ ಶಿಕ್ಷಣ ಪಡೆದಿದ್ದಾರೆ. ಅವರ ಉದ್ಯಮ ದೇಶದಾದ್ಯಂತ ವ್ಯಾಪಿಸಿದೆ’ ಎಂದು ಬಿಜೆಪಿ ಹಿರಿಯ ನಾಯಕ ಕೈಲಾಸ್‌ ವಿಜಯವರ್ಗೀಯ ಪ್ರತಿಕ್ರಿಯಿಸಿದ್ದಾರೆ.

‘ಉತ್ತರ ಪ್ರದೇಶ ಮತ್ತು ಬಿಹಾರದ ಜನರು ತಮ್ಮ ಕಠಿಣ ಪರಿಶ್ರಮದಿಂದ ಮಧ್ಯಪ್ರದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಮುಖ್ಯಮಂತ್ರಿಗಳು ಹೇಳಬೇಕು’ ಎಂದು ಅವರು ಸವಾಲು ಹಾಕಿದ್ದಾರೆ.

‘ಕಮಲನಾಥ್‌ ಹೇಳಿಕೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶ ಹಾಗೂ ಬಿಹಾರ ಜನರ ಕ್ಷಮೆ ಕೇಳಬೇಕು’ ಎಂದು ಬಿಜೆಪಿ ನಾಯಕ ಗಿರಿರಾಜ್‌ ಸಿಂಗ್‌ ಒತ್ತಾಯಿಸಿದ್ದಾರೆ.

ಕಮಲನಾಥ್‌ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ನಿರಾಕರಿಸಿದ್ದಾರೆ.

ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪರಿಶೀಲಿಸಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.