ADVERTISEMENT

ಕನಿಕಾ ಕಪೂರ್‌ಗೆ 5ನೇ ಬಾರಿ ನಡೆಸಿದ ಪರೀಕ್ಷೆಯಲ್ಲೂ ಕೋವಿಡ್-19 ದೃಢ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 10:46 IST
Last Updated 31 ಮಾರ್ಚ್ 2020, 10:46 IST
ಗಾಯಕಿ ಕನಿಕಾ ಕಪೂರ್
ಗಾಯಕಿ ಕನಿಕಾ ಕಪೂರ್   

ನವದೆಹಲಿ: ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಬೇಬಿಡಾಲ್ ಹಾಡಿನ ಖ್ಯಾತಿಯ ಗಾಯಕಿ ಕನಿಕಾ ಕಪೂರ್ ಪರೀಕ್ಷೆಗೆ ಒಳಗಾಗಿದ್ದು, ಸತತ ಐದನೇ ಬಾರಿಕೋವಿಡ್-19 ಇರುವುದು ದೃಢಪಟ್ಟಿದೆ. 41 ವರ್ಷದ ಈಕೆ ಸದ್ಯ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಎಸ್‌ಜಿಪಿಜಿಐಎಂಎಸ್) ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಮ್ಮೆ ಕೊರೊನಾ ವೈರಸ್ ಸೋಂಕು ತಗುಲಿರುವ ರೋಗಿಗಳನ್ನು ಪ್ರತಿ 48 ಗಂಟೆಗಳಿಗೊಮ್ಮೆ ಪರೀಕ್ಷಿಸಲಾಗುತ್ತದೆ. ಹಾಗಾಗಿ ನಿಗಾ ವಹಿಸುವುದರಿಂದ ಬಿಡುಗಡೆಗೊಳ್ಳಲು ಕೋವಿಡ್-19 ಪರೀಕ್ಷೆಯಲ್ಲಿ ಎರಡು ಬಾರಿ ನಕಾರಾತ್ಮಕ ವರದಿಯನ್ನು ಹೊಂದಬೇಕಾಗುತ್ತದೆ. ಹೀಗಾಗಿ ಗಾಯಕಿಗೆ ನಡೆದಿರುವ ಐದನೇ ಮಾದರಿ ಪರೀಕ್ಷೆ ಇದಾಗಿದೆ.

ಆಸ್ಪತ್ರೆಯ ನಿರ್ದೇಶಕ ಪ್ರೊ. ಆರ್. ಕೆ. ಧಿಮನ್ ಮಾತನಾಡಿ, ಕಪೂರ್ ಅವರ ಆರೋಗ್ಯ ಇದೀಗ ಸ್ಥಿರವಾಗಿದೆ ಮತ್ತು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಸೋಮವಾರವಷ್ಟೇ ಕನಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ನಾನು ಚೆನ್ನಾಗಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದ ಅವರು ತಾನು ಐಸಿಯುನಲ್ಲಿದ್ದೇನೆ ಎನ್ನುವ ವದಂತಿಗಳನ್ನು ತಳ್ಳಿಹಾಕಿದ್ದರು. "ನಿದ್ದೆ ಮಾಡಲು ಹೊರಟಿದ್ದೇನೆ. ನಿಮ್ಮೆಲ್ಲರಿಗೂ ನನ್ನ ಪ್ರೀತಿಯ ಶುಭಕಾಮನೆಗಳು. ನೀವೆಲ್ಲರೂ ಸುರಕ್ಷಿತವಾಗಿರಬೇಕು. ನಿಮ್ಮ ಕಾಳಜಿಗೆ ಧನ್ಯವಾದಗಳು ಆದರೆ ನಾನು ಐಸಿಯುನಲ್ಲಿಲ್ಲ. ನಾನು ಚೆನ್ನಾಗಿದ್ದೇನೆ. ನನ್ನ ಮುಂದಿನ ಪರೀಕ್ಷೆ ನಕಾರಾತ್ಮಕವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಬರೆದಿದ್ದರು.

ಕೊರೊನಾ ವೈರಸ್ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಕನಿಕಾ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಮಾರ್ಚ್ 21ರಂದು ಪ್ರಕರಣ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ತನ್ನನ್ನು ಅಪರಾಧಿಯಂತೆ ಭಾವಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕನಿಕಾ ಆರೋಪಿಸಿದ್ದರು. ಬಳಿಕ ಹೇಳಿಕ ಬಿಡುಗಡೆ ಮಾಡಿದ್ದ ಆಸ್ಪತ್ರೆಯು, ಕನಿಕಾ ರೋಗಿಯಂತೆ ವರ್ತಿಸಬೇಕು ಎಂದು ಹೇಳಿತ್ತು.

ಕ್ರಮವಾಗಿ ಎರಡನೇ ಮತ್ತು ಮೂರನೇ ಬಾರಿಗೆ ಅಂದರೆ ಮಾರ್ಚ್ 24 ಮತ್ತು ಮಾರ್ಚ್ 28ರಂದು ನಡೆದ ಪರೀಕ್ಷೆಯಲ್ಲಿ ಕನಿಕಾ ಅವರಿಗೆ ಕೋವಿಡ್ -19 ದೃಢಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.