
ಕಾನ್ಪುರ ದೆಹಾತ್ (ಉತ್ತರ ಪ್ರದೇಶ): ಇಲ್ಲಿನ ಹಿಟ್ಟಿನ ಗಿರಣಿಯಲ್ಲಿ ಯಂತ್ರವೊಂದು ಸ್ಫೋಟಗೊಂಡು, ಅದರಲ್ಲಿನ ಭಾರವಾದ ಕಲ್ಲು ಹಾರಿ ಬಾಲಕನೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.
ಘಟನೆಯು ಕಾನ್ಪುರದ ದೆಹಾತ್ ಜಿಲ್ಲೆಯ ಸರ್ಗಾವ್ ಬುಜುರ್ಗ್ ಗ್ರಾಮದಲ್ಲಿ ಶನಿವಾರ ನಡೆಸಿದೆ. ಮೋಹಿತ್ (15) ಮೃತ ಬಾಲಕ.
ಯಂತ್ರ ಸ್ಫೋಟಗೊಂಡಾಗ ಸ್ಥಳದಲ್ಲಿ ಐವರು ಜನರಿರುವುದು ಸಿ.ಸಿ.ಟಿ.ವಿ ವಿಡಿಯೊದಲ್ಲಿ ದಾಖಲಾಗಿದೆ. ಸ್ಫೋಟವಾಗುತ್ತಿದ್ದಂತೆ ಕೋಣೆಯು ಹಿಟ್ಟಿನಿಂದ ತುಂಬಿತ್ತು ಮತ್ತು ಎಲ್ಲರೂ ರಕ್ಷಣೆಗಾಗಿ ಓಡಿದ್ದರು. ಆಗ ಮೋಹಿತ್ ಕುಸಿದುಬಿದ್ದರು.
ಅಕ್ಬರ್‌ಪುರ ವೃತ್ತ ನಿರೀಕ್ಷಕ ಸಂಜಯ್ ವರ್ಮಾ ಮಾತನಾಡಿ, ‘ಜೋಳದ ಹಿಟ್ಟು ಮಾಡಿಸಲು ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಮೋಹಿತ್ ಗಿರಣಿಗೆ ಹೋಗಿದ್ದರು. ಹಠಾತ್ ಆಗಿ ಯಂತ್ರ ಸ್ಫೋಟಗೊಂಡು ಅದರಲ್ಲಿನ ಬೃಹತ್ ಕಲ್ಲು ಅವರ ತಲೆಯ ಹಿಂಬಾಗಕ್ಕೆ ತೀವ್ರವಾಗಿ ಬಡಿಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.