ADVERTISEMENT

ಠಾಣೆಯಲ್ಲಿ ದುಬೆ ಸಹಚರನ ಬಂಧನ: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ

ಮುಂಬೈ ಎಟಿಎಸ್‌ ಕಾರ್ಯಾಚರಣೆ

ಪಿಟಿಐ
Published 11 ಜುಲೈ 2020, 19:32 IST
Last Updated 11 ಜುಲೈ 2020, 19:32 IST
ಬಿಕ್ರು ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕ್ಷಿಪ್ರ ಕಾರ್ಯ ಪಡೆ ನಿಯೋಜಿಸಲಾಗಿದೆ. ವಿಕಾಸ ದುಬೆಯ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಗ್ರಾಮಸ್ಥರಿಂದ ಮಾಹಿತಿ ಪಡೆದರು. (ಪಿಟಿಐ ಚಿತ್ರ)
ಬಿಕ್ರು ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕ್ಷಿಪ್ರ ಕಾರ್ಯ ಪಡೆ ನಿಯೋಜಿಸಲಾಗಿದೆ. ವಿಕಾಸ ದುಬೆಯ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಗ್ರಾಮಸ್ಥರಿಂದ ಮಾಹಿತಿ ಪಡೆದರು. (ಪಿಟಿಐ ಚಿತ್ರ)   

ಮುಂಬೈ, ನವದೆಹಲಿ, ಲಖನೌ: ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ರೌಡಿಶೀಟರ್‌ ವಿಕಾಸ ದುಬೆಯ ಒಬ್ಬ ಸಹಚರ ಮತ್ತು ಆತನ ಚಾಲಕನನ್ನು ಮಹಾರಾಷ್ಟ್ರದ ಠಾಣೆಯಲ್ಲಿ ಶನಿವಾರ ಬಂಧಿಸಲಾಗಿದೆ.

ಅರವಿಂದ ಅಲಿಯಾಸ್‌ ಗುಡ್ಡಾನ್‌ ತ್ರಿವೇದಿ(46) ಮತ್ತು ಆತನ ಚಾಲಕ ಸೋನು ತಿವಾರಿಯನ್ನು(30) ಮುಂಬೈನ ಭಯೋತ್ಪಾದನೆ ನಿಗ್ರಹ ತಂಡವು (ಎಟಿಎಸ್‌) ಬಂಧಿಸಿದೆ.

ಇತ್ತೀಚೆಗೆ ಕಾನ್ಪುರ ಜಿಲ್ಲೆಯ ಬಿಕ್ರು ಗ್ರಾಮದಲ್ಲಿ ನಡೆದ ಎಂಟು ಪೊಲೀಸರ ಹತ್ಯೆ ಪ್ರಕರಣದಲ್ಲಿ ತ್ರಿವೇದಿ ಭಾಗಿಯಾಗಿದ್ದ ಎನ್ನಲಾಗಿದೆ.

ADVERTISEMENT

ಬಿಕ್ರು ಗ್ರಾಮದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದ ಬಳಿಕ ವಿಕಾಸ ದುಬೆ ಮತ್ತು ಇತರರ ಜತೆ ತ್ರಿವೇದಿಯೂ ನಾಪತ್ತೆಯಾಗಿದ್ದ. ಮುಂಬೈ ಎಟಿಎಸ್‌ನ ಜುಹು ಘಟಕಕ್ಕೆ ಈತನ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ‘ಎನ್‌ಕೌಂಟರ್‌ ಸ್ಪೆಷಲಿಸ್ಟ್‌’ ಇನ್‌ಸ್ಪೆಕ್ಟರ್‌ ದಯಾ ನಾಯಕ್‌ ನೇತೃತ್ವದ ತಂಡ ತ್ರಿವೇದಿ ಮತ್ತು ಆತನ ಚಾಲಕನನ್ನು ಠಾಣೆ ನಗರ ಕೋಲಶೇಟ್‌ ಪ್ರದೇಶದಲ್ಲಿ ಬಂಧಿಸಿದ್ದಾರೆ ಎಂದು ಎಟಿಎಸ್‌ ಘಟಕದ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಂ ದೇಶಮಾನೆ ತಿಳಿಸಿದ್ದಾರೆ.

2001ರಲ್ಲಿ ಸಚಿವರಾಗಿದ್ದ ಸಂತೋಷ್‌ ಶುಕ್ಲಾ ಅವರ ಹತ್ಯೆ ಮತ್ತು ಇತರ ಅಪರಾಧಗಳಲ್ಲಿ ತಾನು ಮತ್ತು ದುಬೆ ಭಾಗಿಯಾಗಿರುವುದಾಗಿ ಪ್ರಾಥಮಿಕ ವಿಚಾರಣೆ ಸಂದರ್ಭದಲ್ಲಿ ತ್ರಿವೇದಿ ಒಪ್ಪಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಅರ್ಜಿ ಸಲ್ಲಿಕೆ:ವಿಕಾಸ ದುಬೆ ಮತ್ತು ಆತನ ಸಹಚರರ ಎನ್‌ಕೌಂಟರ್‌ ಕುರಿತು ಸಿಬಿಐ ಅಥವಾ ಎನ್‌ಐಎ ಅಥವಾ ಸುಪ್ರೀಂ ಕೋರ್ಟ್‌ ನಿಗಾದಲ್ಲಿ ತನಿಖೆ ನಡೆಸಬೇಕು ಎಂದು ಹೊಸದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಎಂಟು ಪೊಲೀಸರ ಹತ್ಯೆ ಪ್ರಕರಣದಲ್ಲಿ ಪೊಲೀಸರು, ಕ್ರಿಮಿನಲ್‌ಗಳು ಮತ್ತು ರಾಜಕಾರಣಿಗಳ ಪಾತ್ರದ ಬಗ್ಗೆ ತನಿಖೆಯಾಗಬೇಕು ಎಂದು ಈ ಅರ್ಜಿಗಳಲ್ಲಿ ಕೋರಲಾಗಿದೆ.

‘ಕೆಲವರನ್ನು ರಕ್ಷಿಸಲು ಎನ್‌ಕೌಂಟರ್‌ ಮಾಡಲಾಗಿದೆಯೇ? ಪೊಲೀಸರ ಗುಂಡು ಹಾರಿಸುವ ಪ್ರವೃತ್ತಿ ಮೇಲೆ ನಿಗಾವಹಿಸದಿದ್ದರೆ ಅರಾಜಕತೆಗೆ ಕಾರಣವಾಗಲಿದೆ. ಕಾನೂನಿನ ಅನ್ವಯವೇ ಯಾವುದೇ ಅಪರಾಧಿ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯ’ ಎಂದು ಅರ್ಜಿ ಸಲ್ಲಿಸಿರುವ ವಕೀಲ ಅನೂಪ್‌ ಪ್ರಕಾಶ್‌ ಅವಸ್ಥಿ ಪ್ರತಿಪಾದಿಸಿದ್ದಾರೆ.

ಪಿಯುಸಿಎಲ್‌ ಸಂಘಟನೆ ಸಹ ಈ ಬಗ್ಗೆ ಅರ್ಜಿ ಸಲ್ಲಿಸಿದೆ.

ಅಕ್ರಮ ಆಸ್ತಿ: ದುಬೆ ಕುಟುಂಬದ ವಿರುದ್ಧ ಇ.ಡಿ ಪ್ರಕರಣ

ವಿಕಾಸ ದುಬೆ ನಡೆಸಿದ ಅಕ್ರಮ ಹಣದ ವಹಿವಾಟು ಮತ್ತು ಆಸ್ತಿಗಳ ಕುರಿತು ಆತನ ಕುಟುಂಬದ ಸದಸ್ಯರ ವಿರುದ್ಧ ಹಾಗೂ ಸಹಚರರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಪ್ರಕರಣ ದಾಖಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಈ ಬಗ್ಗೆ ಅಧಿಕಾರಿಗಳು ಪ್ರಕರಣ ದಾಖಲಿಸಲಿದ್ದಾರೆ. ದುಬೆಗೆ ಸಂಬಂಧಿಸಿದ ಎಲ್ಲ ಎಫ್‌ಐಆರ್‌ಗಳು ಮತ್ತು ಆರೋಪಪಟ್ಟಿಗಳನ್ನು ಸಲ್ಲಿಸುವಂತೆ ಕಾನ್ಪುರ ಪೊಲೀಸರನ್ನು ಲಖನೌದಲ್ಲಿರುವ ಇ.ಡಿ. ವಲಯ ಕಚೇರಿಯ ಅಧಿಕಾರಿಗಳು ಕೋರಿದ್ದಾರೆ.

ಅಪರಾಧ ಚಟುವಟಿಕೆಗಳ ಮೂಲಕ ದುಬೆ ಅಪಾರ ಆಸ್ತಿಯನ್ನು ತನ್ನ ಹಾಗೂ ಕುಟುಂಬದ ಸದಸ್ಯರ ಹೆಸರಿನಲ್ಲಿ ಖರೀದಿಸಿದ್ದ. ಸುಮಾರು 24 ಬೇನಾಮಿ ಆಸ್ತಿಗಳು, ಬ್ಯಾಂಕ್‌ ಠೇವಣಿಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜತೆಗೆ, ವಿದೇಶದಲ್ಲಿ ದುಬೆ ಮತ್ತು ಇತರರ ಆಸ್ತಿ ಇರುವ ಸಾಧ್ಯತೆಯ ಬಗ್ಗೆ ವಿವರಗಳನ್ನು ಪಡೆಯಲಾಗುವುದು. ದುಬೆ ಸಾವಿಗೀಡಾಗಿದ್ದರೂ ಪಿಎಂಎಲ್‌ಎ ಅಡಿಯಲ್ಲಿ ತನಿಖೆ ನಡೆಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

ಲಖನೌಗೆ ಹಿಂತಿರುಗಿದ ಕುಟುಂಬದ ಸದಸ್ಯರು:

ಪೊಲೀಸ್‌ ತಂಡದ ಮೇಲಿನ ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಕರೆತರಲಾಗಿದ್ದ ವಿಕಾಸ ದುಬೆ ಪತ್ನಿ, ಪುತ್ರ ಮತ್ತು ಮನೆಗೆಲಸದವರು, ಕಾನ್ಪುರದಲ್ಲಿ ನಡೆದ ದುಬೆ ಅಂತ್ಯಕ್ರಿಯೆ ಬಳಿಕ ಲಖನೌಗೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು ಐದು ಗಂಟೆಗಳ ಕಾಲ ಕಾನ್ಪುರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಐದು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಯಿತು.

‘ಹೌದು, ನನ್ನ ಪತಿ ತಪ್ಪಿತಸ್ಥ’

ಕಾನ್ಪುರ: ‘ನನ್ನ ಪತಿ ತಪ್ಪಿತಸ್ಥರು, ಅವರು ಇಂಥ ಅಂತ್ಯಕ್ಕೆ ಅರ್ಹರಾಗಿದ್ದರು’ ಎಂದು ಎನ್‌ಕೌಂಟರ್‌ನಲ್ಲಿ ಹತನಾದ ವಿಕಾಸ್‌ ದುಬೆಯ ಪತ್ನಿ ರಿಚಾ ದುಬೆ ಶನಿವಾರ ಹೇಳಿದ್ದಾರೆ.

ದುಬೆಯ ಅಂತ್ಯಸಂಸ್ಕಾರ ಶುಕ್ರವಾರ ಇಲ್ಲಿನ ಭೈರೊಘಾಟ್‌ ನಲ್ಲಿ ಬಿಗಿ ಭದ್ರತೆಯಲ್ಲಿ ನಡೆಯಿತು. ಅಲ್ಲಿಗೆ ಬಂದಿದ್ದ ರಿಚಾ ಅವರನ್ನು ಎದುರಾದ ಮಾಧ್ಯಮ ಪ್ರತಿನಿಧಿಗಳು, ‘ದುಬೆಯನ್ನು ಈ ರೀತಿ ಹತ್ಯೆ ಮಾಡಿದ್ದು ಸರಿಯೇ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ರಿಚಾ, ‘ಹೌದು ಹೌದು ಹೌದು, ನನ್ನ ಪತಿ ತಪ್ಪಿತಸ್ಥರು, ಅವರು ಈ ರೀತಿಯ ಅಂತ್ಯಕ್ಕೆ ಅರ್ಹರು’ ಎಂದು ಸಿಟ್ಟಿನಿಂದ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.