
ಶಿವಂ ಮಿಶ್ರಾ ಮತ್ತು ಅಪಘಾತಕ್ಕೀಡಾಗಿರುವ ಲ್ಯಾಂಬೊರ್ಗಿನಿ ಕಾರು
Credit: X/@ANI
ಕಾನ್ಪುರ: ಐಷಾರಾಮಿ ಲ್ಯಾಂಬೊರ್ಗಿನಿ ಕಾರು ಅಪಘಾತ ಪ್ರಕರಣ ಸಂಬಂಧ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಫೆಬ್ರುವರಿ 9ರಂದು ಕಾನ್ಪುರದ ಗ್ವಾಲ್ಟೋಲಿ ಪ್ರದೇಶದ ವಿಐಪಿ ರಸ್ತೆಯಲ್ಲಿ ಶಿವಂ ಮಿಶ್ರಾ ಚಾಲನೆ ಮಾಡುತ್ತಿದ್ದ ಲ್ಯಾಂಬೊರ್ಗಿನಿ ಕಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
‘ಅಪಘಾತ ನಡೆದಾಗ ಕಾರು ಚಲಾಯಿಸುತ್ತಿದ್ದದ್ದು ಚಾಲಕ ಮೋಹನ್. ಶಿವಂ ಮಿಶ್ರಾ ಅಲ್ಲ. ನಾವು ನ್ಯಾಯಾಲಯಕ್ಕೆ ಅಗತ್ಯ ಸಾಕ್ಷ್ಯಗಳನ್ನು ಹಾಜರುಪಡಿಸುತ್ತೇವೆ. ಇದನ್ನು ಕ್ರಿಮಿನಲ್ ಅಪರಾಧಕ್ಕಿಂತ ಅಪಘಾತ ಪ್ರಕರಣವಾಗಿ ಅಧಿಕಾರಿಗಳು ಪರಿಗಣಿಸಬೇಕು’ ಎಂದು ಮಿಶ್ರಾ ಅವರ ವಕೀಲ ಮೃತ್ಯುಂಜಯ ಕುಮಾರ್ ಒತ್ತಾಯಿಸಿದ್ದರು. ಇದರಿಂದಾಗಿ ಪ್ರಕರಣ ವಿವಾದಾತ್ಮಕ ತಿರುವು ಪಡೆದುಕೊಂಡಿತ್ತು.
‘ಪ್ರಕರಣ ಸಂಬಂಧ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳ ಪರಿಶೀಲನೆ, ಪ್ರತ್ಯಕ್ಷದರ್ಶಿಗಳ ಹೇಳಿಕೆ ಮತ್ತು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಅಪಘಾತ ಸಂಭವಿಸಿದಾಗ ಶಿವಂ ಮಿಶ್ರಾ ಅವರೇ ಕಾರು ಚಲಾಯಿಸುತ್ತಿರುವುದು ದೃಢಪಟ್ಟಿದೆ’ ಎಂದು ಪೊಲೀಸ್ ಕಮಿಷನರ್ ರಘುಬೀರ್ ಲಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.