ADVERTISEMENT

ಪ್ರಧಾನಿಯವರೇ ಆರ್ಥಿಕ ಸ್ಥಿತಿಯತ್ತ ಗಮನ ಹರಿಸಿ- ಕಪಿಲ್ ಸಿಬಲ್

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 11:29 IST
Last Updated 13 ಸೆಪ್ಟೆಂಬರ್ 2019, 11:29 IST
   

ನವದೆಹಲಿ: ' ವಾಟ್ ಎ ವಂಡರ್ ಫುಲ್ ಟ್ರೈಲರ್ , ಬಾಕಿ ಫಿಲ್ಮ್ ನಹಿ ದೇಖ್ನಿ' ಎಂದು ಟ್ವೀಟ್ ಮಾಡುವ ಮೂಲಕ ಮೋದಿ ಹೇಳಿದ್ದ 'ಪಿಕ್ಟರ್ ಅಭಿ ಬಾಕಿ ಹೈ' ಹೇಳಿಕೆಗೆ ಕಾಂಗ್ರೆಸ್ ಮುಖಂಡ ಹಾಗೂ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ತಿರುಗೇಟು ನೀಡಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಮೇಲಿನಂತೆ ಹೇಳಿಕೊಂಡಿರುವ ಕಪಿಲ್ ಸಿಬಲ್,ಅಭಿವೃದ್ಧಿದರ ಶೇ.5, ಕಂದಾಯ ಸಂಗ್ರಹದಲ್ಲಿ ಇಳಿಕೆ, ಆಟೋ ಮೊಬೈಲ್ ಕ್ಷೇತ್ರ ಸತತ 10 ತಿಂಗಳ ಕಾಲ ಮಾರಾಟದಲ್ಲಿ ಏರಿಕೆ ಕಾಣದೆ ಇರುವುದು, ನಿರುದ್ಯೋಗ ಸಮಸ್ಯೆ ಶೇ.8.2ಕ್ಕೆ ಹೆಚ್ಚಳವಾಗಿರುವುದು ಇವೆಲ್ಲವನ್ನೂ 100 ದಿನಗಳ ಆಡಳಿತದಲ್ಲಿ ನಾವು ನೋಡಿರುವ ಟ್ರೈಲರ್. ಇನ್ನು ಬಾಕಿ ಸಿನಿಮಾ ನೋಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭಾರತದ ಆರ್ಥಿಕ ಸ್ಥಿತಿಯತ್ತ ಗಮನ ಹರಿಸಬೇಕು. ನ್ಯೂಟನ್ ಅಥವಾ ಐನ್‌ಸ್ಟೀನ್‌ರನ್ನು ನೆನೆಪು ಮಾಡಿಕೊಳ್ಳಬೇಕು. ಜಿಡಿಪಿ ದರ ಸತತವಾಗಿ ಕುಸಿಯುತ್ತಿದ್ದು, ರಫ್ತು ಪಾತಾಳಕ್ಕೆ ಇಳಿದಿದೆ. ಆಟೋ ಮೊಬೈಲ್ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಕಂಡಿರದ ನಷ್ಟ ಕಂಡು ಬಂದಿದೆ. ಇದು ನಾವು ನೋಡುತ್ತಿರುವ ಟ್ರೈಲರ್, ತಿಂಗಳಿಗೆ 5 ಸಾವಿರ ಸಂಪಾದಿಸುವ ವ್ಯಕ್ತಿ ಹೊಸ ಮೋಟಾರು ವಾಹನ ಕಾಯ್ದೆಯಿಂದಾಗಿ 50 ಸಾವಿರ ರೂಪಾಯಿ ದಂಡ ಕಟ್ಟುತ್ತಿದ್ದಾನೆ ಎಂದು ಕಪಿಲ್ ಹೇಳಿದ್ದಾರೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 12ರಂದು ಜಾರ್ಖಂಡ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ನಾವು ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟಿದ್ದೇವೆ. ಇದರ ಮೊದಲ ಪ್ರಯತ್ನವಾಗಿ 100 ದಿನಗಳಲ್ಲಿ ಹಲವರನ್ನು ಜೈಲಿಗೆ ಕಳುಹಿಸಿದ್ದೇವೆ. ಇದು ಕೇವಲ ಟ್ರೈಲರ್, ಫುಲ್ ಪಿಕ್ಚರ್ ಅಭಿ ಬಾಕಿ ಹೈ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.