ADVERTISEMENT

ಪಾಪ್ಯುಲರ್ ಫ್ರಂಟ್‌ನಿಂದ ಕಪಿಲ್ ಸಿಬಲ್ ಹಣ ಪಡೆದದ್ದು ಯಾಕೆ ಗೊತ್ತೇ?

₹ 77 ಲಕ್ಷ ಪಡೆದದ್ದು ಸಿಎಎ ವಿರೋಧಿ ಹೋರಾಟಕ್ಕಲ್ಲ ಎಂದ ಕಾಂಗ್ರೆಸ್ ನಾಯಕ

ಪಿಟಿಐ
Published 29 ಜನವರಿ 2020, 8:34 IST
Last Updated 29 ಜನವರಿ 2020, 8:34 IST
ಕಪಿಲ್ ಸಿಬಲ್
ಕಪಿಲ್ ಸಿಬಲ್   

ನವದೆಹಲಿ:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯಿಂದ ₹ 77 ಲಕ್ಷ ಪಡೆದಿರುವುದನ್ನು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಒಪ್ಪಿಕೊಂಡಿದ್ದಾರೆ. ಆದರೆ, ಹಣ ಪಡೆದಿರುವುದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಹೋರಾಟಕ್ಕಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಿಎಎ ಕಾನೂನು ಅಸ್ತಿತ್ವಕ್ಕೆ ಬರುವುದಕ್ಕೂ ಮುನ್ನವೇ 2017 ಮತ್ತು 2018ರಲ್ಲಿ ಕಾನೂನು ಸೇವೆ ಒದಗಿಸಿದ್ದಕ್ಕಾಗಿ ಹಣ ಪಡೆಯಲಾಗಿತ್ತು. ಅದುಹಾದಿಯಾ ವಿವಾಹ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಕ್ಕೆ ಸಂಬಂಧಿಸಿದ್ದು ಎಂದು ಸಿಬಲ್ ತಿಳಿಸಿದ್ದಾರೆ.

‘ವೃತ್ತಿಪರ ಸೇವೆಗಾಗಿ ನನಗೆ ಹಣ ನೀಡಲಾಗಿತ್ತೇ ವಿನಹ ಬೇರೆ ಯಾವುದಕ್ಕೂ ಅಲ್ಲ. ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ’ ಎಂದು ಸಿಬಲ್ ಎಚ್ಚರಿಕೆ ನೀಡಿದ್ದಾರೆ.

‘ಪಿಎಫ್‌ಐಯಿಂದ ನನ್ನ ಬ್ಯಾಂಕ್ ಖಾತೆಗೆ ₹ 77 ಲಕ್ಷ ಪಾವತಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಸಿಎಎ ವಿರೋಧಿ ಹೋರಾಟಕ್ಕೆ ಪಿಎಫ್‌ಐ ಹಣ ನೀಡುತ್ತಿದೆ ಎಂದು ಕೆಲವು ಸುದ್ದಿವಾಹಿನಿಗಳು ವರದಿ ಮಾಡುತ್ತಿದ್ದು, ನನ್ನ ಖಾತೆಗೆ ಸಂದಾಯವಾಗಿರುವ ಹಣವನ್ನು ಅದರ ಜತೆ ತಳಕು ಹಾಕುತ್ತಿವೆ. ಸಿಎಎ ಕಾನೂನಾಗಿ ಜಾರಿಗೆ ಬಂದಿರುವುದು 2019ರ ಡಿಸೆಂಬರ್‌ನಲ್ಲಿ. ಸಿಎಎ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ನಾನು ಹಾಜರಾಗಿರುವ ಯಾವುದೇ ಪ್ರಕರಣಗಳಿಗೂ ಈವರೆಗೂ ಶುಲ್ಕ ಪಡೆದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಾದಿಯಾ ಪ್ರಕರಣದಲ್ಲಿ ವಾದ ಮಂಡಿಸಿದ್ದಕ್ಕೆ 2017ರ ಆಗಸ್ಟ್ 4ರಂದು ಮೊದಲ ಬಾರಿ ಶುಲ್ಕ ಪಡೆಯಲಾಗಿತ್ತು. ನಂತರದ 7 ಶುಲ್ಕಗಳನ್ನು 2018ರ ಮಾರ್ಚ್‌ 8ರಂದು ಪಡೆಯಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಏನಿದು ಹಾದಿಯಾ ಪ್ರಕರಣ? ಇಲ್ಲಿ ಓದಿ:ವಿವಾದ ಹುಟ್ಟುಹಾಕಿದ ಹಾದಿಯಾ ವಿವಾಹ ಪ್ರಕರಣ

ಸಿಎಎ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೂ ಪಿಎಫ್‌ಐ ಸಂಘಟನೆಗೂ ‘ಹಣಕಾಸು ಸಂಬಂಧವಿದೆ‘ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಹೇಳಿತ್ತು. ಕಪಿಲ್ ಸಿಬಲ್ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರಿಗೆ ಹಣ ಸಂದಾಯವಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ ಎಂದೂ ಹೇಳಿತ್ತು.

‘ಗಂಡ–ಹೆಂಡತಿ ಪ್ರಕರಣದಲ್ಲಿ ಪಿಎಫ್‌ಐಗೇನು ಕೆಲಸ?’:ಪತಿ–ಪತ್ನಿ ಪ್ರಕರಣದಲ್ಲಿ ಪಿಎಫ್‌ಐಗೆ ಏನು ಕೆಲಸ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರಶ್ನಿಸಿದ್ದಾರೆ.

ಸಿಬಲ್ ಸ್ಪಷ್ಟನೆ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಅವರು, ‘ಹಾದಿಯಾ ಪ್ರಕರಣ ಗಂಡ ಮತ್ತು ಹೆಂಡತಿ ವಿಚಾರಕ್ಕೆ ಸಂಬಂಧಿಸಿದ್ದಲ್ಲವೇ, ಅದರಲ್ಲಿ ಪಿಎಫ್‌ಐ ಪಾತ್ರವೇನು? ಹಣದ ಮೂಲವನ್ನು ಪರಿಶೀಲಿಸಿಲ್ಲ ಎಂದೂ ಅವರು (ಸಿಬಲ್) ಹೇಳಿದ್ದಾರೆ. ಒಬ್ಬರು ವಕೀಲರು ಈ ರೀತಿ ಹೇಳಿಕೆ ನೀಡುವುದೇ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.