ADVERTISEMENT

ಧನಕರ್‌ ರಾಜ್ಯಸಭೆಯ ಸ್ಪೀಕರ್‌ ಹೊರತು, ಪಕ್ಷದ ವಕ್ತಾರರಾಗಬಾರದು: ಕಪಿಲ್ ಸಿಬಲ್

ಪಿಟಿಐ
Published 18 ಏಪ್ರಿಲ್ 2025, 13:20 IST
Last Updated 18 ಏಪ್ರಿಲ್ 2025, 13:20 IST
<div class="paragraphs"><p>ಜಗದೀಪ ಧನಕರ್‌, ಕಪಿಲ್ ಸಿಬಲ್</p></div>

ಜಗದೀಪ ಧನಕರ್‌, ಕಪಿಲ್ ಸಿಬಲ್

   

ನವದೆಹಲಿ: ಸುಪ್ರೀಂ ಕೋರ್ಟ್‌ ಅನ್ನು ಟೀಕಿಸಿರುವ ರಾಜ್ಯಸಭಾ ಸಭಾಪತಿ ಜಗದೀಪ್‌ ಧನಕರ್ ನಡೆಯನ್ನು ರಾಜ್ಯಸಭೆ ಸದಸ್ಯ ಕಪಿಲ್‌ ಸಿಬಲ್ ತೀವ್ರವಾಗಿ ಖಂಡಿಸಿದ್ದಾರೆ.

‘ರಾಜ್ಯಸಭಾ ಸಭಾಪತಿ ಅವರು ಹೀಗೆ ರಾಜಕೀಯ ಹೇಳಿಕೆ ನೀಡಿದ್ದನ್ನು ನಾನು ಎಂದಿಗೂ ಕಂಡಿಲ್ಲ’ ಎಂದಿದ್ದಾರೆ. 

ADVERTISEMENT

ಮಸೂದೆಗಳಿಗೆ ಅನುಮೋದನೆ ನೀಡಲು ರಾಷ್ಟ್ರಪತಿ ಅವರಿಗೆ ಗಡುವು ನಿಗದಿಪಡಿಸಿದ್ದ ಸುಪ್ರೀಂ ಕೋರ್ಟ್‌ ತೀರ್ಪಿಗೆ ಪ್ರತಿಕ್ರಿಯಿಸಿದ್ದ ಧನಕರ್, ‘ಪ್ರಜಾಸತ್ತಾತ್ಮಕ ಅಂಗದ ಮೇಲೆ ‘ಅಣ್ವಸ್ತ್ರ ಕ್ಷಿಪಣಿ’ ಪ್ರಯೋಗಿಸುವ ಮೂಲಕ ಸುಪ್ರೀಂ ಕೋರ್ಟ್‌, ‘ಸೂಪರ್ ಪಾರ್ಲಿಮೆಂಟ್‌’ನಂತೆ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಮಾತಿಗೆ ಪ್ರತಿಕ್ರಿಯಿಸಿದ ಕಪಿಲ್‌ ಸಿಬಲ್‌ ಅವರು, ‘ಧನಕರ್ ಅವರ ಹೇಳಿಕೆಯಿಂದ ನನಗೆ ಬೇಸರ ಮತ್ತು ಆಶ್ಚರ್ಯ ಉಂಟಾಗಿದೆ’ ಎಂದು ಹೇಳಿದರು.

‘ಸಂವಿಧಾನದ ವಿಧಿ 370, ಅಯೋಧ್ಯೆಯ ಪ್ರಕರಣದಲ್ಲಿ ಮೋದಿ ಸರ್ಕಾರದ ನಡೆಗೆ ಟೀಕೆಗಳು ಕೇಳಿಬಂದಾಗ, ಅವುಗಳಿಗೆ ತಿರುಗೇಟು ನೀಡಲು ‘ಸುಪ್ರೀಂ’ ತೀರ್ಪುಗಳನ್ನೇ ಉಲ್ಲೇಖಿಸಲಾಗಿತ್ತು. ಈಗ ಅದೇ ಜನರು ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಲೋಪವನ್ನು ಹುಡುಕುತ್ತಿದ್ದಾರೆ’ ಎಂದು ಹರಿಹಾಯ್ದರು.  

ಸಂವಿಧಾನದ ವಿಧಿ 142 ಅನ್ನು ‘ಅಣ್ವಸ್ತ್ರ ಕ್ಷಿಪಣಿ’ ಎಂದು ಧನಕರ್‌ ಹೇಳಿದ್ದನ್ನು ಖಂಡಿಸಿದ ಸಿಬಲ್, ‘ಸುಪ್ರೀಂ ಕೋರ್ಟ್‌ಗೆ ಇಂತಹ ಅಧಿಕಾರವನ್ನು ಸಂವಿಧಾನ ನೀಡಿದೆ, ಯಾವುದೇ ಸರ್ಕಾರಗಳಲ್ಲ. ರಾಷ್ಟ್ರಪತಿ ಅವರು ಕೇಂದ್ರ ಸಚಿವ ಸಂಪುಟದ ಸಲಹೆಯ ಅನುಸಾರ ಕಾರ್ಯನಿರ್ವಹಿಸುತ್ತಾರೆ. ಅವರಿಗೆ ವ್ಯಕ್ತಿಗತವಾಗಿ ಯಾವುದೇ ಅಧಿಕಾರ ಇರದು. ಧನ್‌ಕರ್ ಅವರು ಇದನ್ನು ತಿಳಿದುಕೊಳ್ಳಬೇಕು’ ಎಂದು ತಿರುಗೇಟು ನೀಡಿದರು.

‘ನಾನು ದೀರ್ಘಕಾಲದಿಂದ ಸಂಸತ್ತಿನಲ್ಲಿದ್ದೇನೆ. ಅಧ್ಯಕ್ಷ ಸ್ಥಾನದಲ್ಲಿದ್ದವರು ಹೀಗೆ ರಾಜಕೀಯ ಹೇಳಿಕೆ ನೀಡಿದ್ದನ್ನು ನಾನು ಎಂದಿಗೂ ನೋಡಿರಲಿಲ್ಲ. ಬಿಜೆಪಿಯಿಂದ ಅಧ್ಯಕ್ಷ ಆಗಿದ್ದವರು ಇಂತಹ ಹೇಳಿಕೆ ನೀಡಿರಲಿಲ್ಲ. ಲೋಕಸಭೆ ಸ್ಪೀಕರ್ ಎಲ್ಲ ಪಕ್ಷಗಳನ್ನು ಸಮಾನವಾಗಿ ಕಾಣಬೇಕು. ಯಾವುದೇ ಸ್ಪೀಕರ್‌ ಪಕ್ಷದ ವಕ್ತಾರ ಆಗಬಾರದು. ಧನ್‌ಕರ್ ಹೀಗಿದ್ದಾರೆ ಎಂದು ನಾನು ಇಲ್ಲಿ ಹೇಳುತ್ತಿಲ್ಲ’ ಎಂದು ಸಿಬಲ್ ಹೇಳಿದರು.

ಸೂಕ್ಷ್ಮತೆ ಇರಬೇಕು: ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮತ್ತು ಮಾಧ್ಯಮಗಳ ನಡೆ ಸಮತೋಲನದಿಂದ ಇರಬೇಕು. ಸೂಕ್ಷ್ಮತೆ ಮೆರೆಯಬೇಕು ಎಂದು ಆರ್‌ಜೆಡಿ ಸಂಸದ ಮನೋಜ್‌ ಕೆ ಝಾ ಪ್ರತಿಕ್ರಿಯಿಸಿದ್ದರೆ, ‘ಸುಪ್ರಿಂ’ ತೀರ್ಪು ಟೀಕಿಸುವ ಧನಕರ್ ನಡೆ ‘ಅನೈತಿಕವಾದುದು’ ಎಂದು ಡಿಎಂಕೆ ನಾಯಕ ತಿರುಚಿ ಶಿವ ಅವರು ಪ್ರತಿಕ್ರಿಯಿಸಿದರು. 

ಎನ್‌ಡಿಎಯೇತರ ಪಕ್ಷಗಳ ರಾಜ್ಯ ಸರ್ಕಾರಗಳ ಪದಚ್ಯುತಿಗೆ ರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿ ಕೊಳ್ಳುವ ಬಿಜೆಪಿ–ಆರ್‌ಎಸ್ಎಸ್‌ ಕ್ರಮವನ್ನು ಸಕ್ರಮಗೊಳಿಸುವಂತೆ ಧನಕರ್‌ ಹೇಳಿಕೆ ಇದೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಪ್ರವೃತ್ತಿ ಅಪಾಯಕಾರಿ ಸ್ವರೂಪದಲ್ಲಿ ತೀವ್ರಗೊಳ್ಳುತ್ತಿದೆ.
ಡಿ.ರಾಜಾ ಸಿಪಿಐ ಪ್ರಧಾನ ಕಾರ್ಯದರ್ಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.