ADVERTISEMENT

ಕಪಿಲ್‌ ಸಿಬಲ್ ಔತಣಕೂಟದಲ್ಲಿ ಪ್ರತಿಪಕ್ಷ ನಾಯಕರ ಒಗ್ಗಟ್ಟು: ಬಿಜೆಪಿ ಸೋಲಿಸಲು ಪಣ

ಪಿಟಿಐ
Published 10 ಆಗಸ್ಟ್ 2021, 8:17 IST
Last Updated 10 ಆಗಸ್ಟ್ 2021, 8:17 IST
ಕಪಿಲ್‌ ಸಿಬಲ್ (ಪಿಟಿಐ ಚಿತ್ರ)
ಕಪಿಲ್‌ ಸಿಬಲ್ (ಪಿಟಿಐ ಚಿತ್ರ)   

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಮತ್ತು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಾಗಿದ್ದೇವೆ ಎಂದು ಪ್ರತಿಪಕ್ಷಗಳ ಪ್ರಮುಖ ನಾಯಕರು ಹೇಳಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಅವರು ಸೋಮವಾರ ಆಯೋಜಿಸಿದ್ದ ಖಾಸಗಿ ಔತಣಕೂಟದಲ್ಲಿ ಪ್ರತಿಪಕ್ಷಗಳ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಕಾಂಗ್ರೆಸ್‌ನ ನಾಯಕತ್ವ ಮತ್ತು ಸಂಘಟನೆಯಲ್ಲಿ ಸುಧಾರಣೆಯಾಗಬೇಕೆಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ನಾಯಕರಲ್ಲಿ ಹೆಚ್ಚಿನವರು ಈ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ. ಈ ನಾಯಕರು ಜತೆಯಾಗಿ ಈ ರೀತಿ ಸಭೆ ನಡೆಸಿರುವುದು ಇದೇ ಮೊದಲಾಗಿದೆ.

ADVERTISEMENT

‘ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸುವುದನ್ನು ಖಾತರಿಪಡಿಸಿಕೊಳ್ಳಲು ಇಂತಹ ಸಭೆಗಳನ್ನು ಹೆಚ್ಚಾಗಿ ಆಯೋಜಿಸಬೇಕು. ನಾವು ಜತೆಯಾಗಿ ಉತ್ತರ ಪ್ರದೇಶದಲ್ಲಿ ಮೊದಲು ಮತ್ತು ನಂತರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕಿದೆ’ ಎಂದು ಸಭೆಯಲ್ಲಿ ಭಾಗವಹಿಸಿದವರ ಪೈಕಿ ಒಬ್ಬರು ನಾಯಕರು ಹೇಳಿದ್ದಾರೆ.

ಸಿಬಲ್ ಅವರ ಔತಣಕೂಟದಲ್ಲಿ ಎನ್‌ಸಿಪಿ ವರಿಷ್ಠ ಶರದ್ ಪವಾರ್, ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒಬ್ರಿಯಾನ್, ಡಿಎಂಕೆಯ ತಿರುಚಿ ಶಿವ, ಆರ್‌ಎಲ್‌ಡಿ ಅಧ್ಯಕ್ಷ ಜಯಂತ್ ಚೌಧರಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ರಾಮಗೋಪಾಲ್ ಯಾದವ್, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್, ಕಾಂಗ್ರೆಸ್ ನಾಯಕರಾದ ಪಿ.ಚಿದಂಬರಂ ಭಾಗವಹಿಸಿದ್ದರು.

ಸಿಪಿಐ(ಎಂ)ನ ಸೀತಾರಾಮ ಯೆಚೂರಿ, ನ್ಯಾಷನಲ್ ಕಾನ್ಫರೆನ್ಸ್‌ನ ಒಮರ್ ಅಬ್ದುಲ್ಲಾ, ಶಿವಸೇನಾದ ಸಂಜಯ್ ರಾವುತ್, ಎಎಪಿಯ ಸಂಜಯ್ ಸಿಂಗ್, ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಸೇರಿದಂತೆ ಇನ್ನೂ ಅನೇಕ ನಾಯಕರು ಔತಣಕೂಟದಲ್ಲಿ ಭಾಗವಹಿಸಿದ್ದರು.

ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ನಾಯಕರ ಪೈಕಿ, ಗುಲಾಂ ನಬಿ ಆಜಾದ್, ಭೂಪಿಂದರ್ ಸಿಂಗ್ ಹೂಡಾ, ಪೃಥ್ವಿರಾಜ್‌ ಚವಾಣ್‌, ಮುಕುಲ್ ವಾಸ್ನಿಕ್‌, ಶಶಿ ತರೂರ್‌, ಮನೀಶ್‌ ತಿವಾರಿ ಮತ್ತು ಆನಂದ್ ಶರ್ಮಾ ಔತಣಕೂಟದಲ್ಲಿ ಭಾಗಿಯಾಗಿದ್ದರು.

ಔತಣಕೂಟದಲ್ಲಿ ಭಾಗವಹಿಸಿರುವ ನಾಯಕರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದಿದ್ದಾರೆ.

ಕಪಿಲ್ ಸಿಬಲ್ ಔತಣಕೂಟ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಅವರಿಗೆ 73 ವರ್ಷವಾದ ಹಿನ್ನೆಲೆಯಲ್ಲಿ ಆಪ್ತರನ್ನು ಔತಣಕೂಟಕ್ಕೆ ಕರೆದಿದ್ದರಷ್ಟೆ ಎಂದು ಕೆಲವು ಮೂಲಗಳು ಈ ಹಿಂದೆ ತಿಳಿಸಿದ್ದವು. ಆದರೆ, ಇದೀಗ ಕೂಟದಲ್ಲಿ ಭಾಗವಹಿಸಿದ್ದ ನಾಯಕರು ಬಹಿರಂಗವಾಗಿ ಬಿಜೆಪಿ ವಿರುದ್ಧದ ಹೋರಾಟದ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.