ತಿರುಪತಿ: ತಿರುಮಲದ ಸಮೀಪ ಅಂದಾಜು ₹200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಎರಡು ಬೃಹತ್ ‘ಯಾತ್ರಾರ್ಥಿ ಸಂಕೀರ್ಣ’ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ ರೆಡ್ಡಿ ಉಪಸ್ಥಿತರಿದ್ದರು. ರಾಜ್ಯದ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ಸರ್ಕಾರ ನೀಡಿರುವ ಯೋಜನೆಯಂತೆ, ಟಿಟಿಡಿ ಈ ಸಂಕೀರ್ಣ ಹಾಗೂ ಮದುವೆ ಸಭಾಂಗಣವನ್ನು ನಿರ್ಮಾಣ ಮಾಡಲಿದೆ ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ತಿಳಿಸಿದರು. ಸಂಕೀರ್ಣ ನಿರ್ಮಾಣದ ಪೂರ್ಣ ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸಲಿದೆ ಎಂದರು.
‘ಶಂಕುಸ್ಥಾಪನೆಗೂ ಮುನ್ನ ಯಡಿಯೂರಪ್ಪ ಹಾಗೂ ಜಗನ್‌ಮೋಹನ ರೆಡ್ಡಿದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ವಿಶ್ವವನ್ನು ಕೋವಿಡ್–19ನಿಂದ ರಕ್ಷಿಸುವ ಉದ್ದೇಶದಿಂದ ಕಳೆದ ಮೂರು ತಿಂಗಳಿಂದ ನಡೆಸಲಾಗುತ್ತಿರುವ ‘ಸುಂದರಕಾಂಡ ಪಾರಾಯಣ’ದಲ್ಲೂ ಇಬ್ಬರೂ ಮುಖ್ಯಮಂತ್ರಿಗಳು ಭಾಗವಹಿಸಿದರು’ ಎಂದು ಅಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.