ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: ಚುನಾವಣಾ ಆಯೋಗವು ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲಿ ವಂಚನೆಗೆ ಅವಕಾಶ ನೀಡಿದೆ ಎಂಬುದಕ್ಕೆ ಕಾಂಗ್ರೆಸ್ ಶೇ 100ರಷ್ಟು ದೃಢವಾದ ಪುರಾವೆ ಹೊಂದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಸದ್ಯವೇ ಅದನ್ನು ನಿಮ್ಮ ಬಳಿಗೆ ತರುತ್ತೇವೆ ಎಂದಿದ್ದಾರೆ.
ಚುನಾವಣಾ ಆಯೋಗವು ತನ್ನ ಕರ್ತವ್ಯವವನ್ನು ನಿರ್ವಹಿಸುತ್ತಿಲ್ಲ ಎಂದು ರಾಹುಲ್ ಆರೋಪಿಸಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ಬಿಹಾರ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಕುರಿತಾದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕದ ಒಂದು ಕ್ಷೇತ್ರದಲ್ಲಿ ಚುನಾವಣಾ ಆಯೋಗವು ವಂಚನೆಗೆ ಅವಕಾಶ ನೀಡಿದೆ ಎಂಬುದಕ್ಕೆ ತಮ್ಮ ಪಕ್ಷವು ಶೇ 100ರಷ್ಟು ದೃಢವಾದ ಪುರಾವೆ ಹೊಂದಿದೆ ಎಂದು ವರದಿಗಾರರಿಗೆ ತಿಳಿಸಿದ್ದಾರೆ.
ಅದನ್ನು ನಿಮಗೆ(ಚುನಾವಣಾ ಆಯೋಗ) ತೋರಿಸಲು ನಿರ್ಧರಿಸಿದ್ದೇವೆ. ಆಗ ಪುರಾವೆಗೆ ಮತ್ತಷ್ಟು ದೃಢತೆ ಸಿಗಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದ್ದಾರೆ.
'ನಾವು ಒಂದು ಕ್ಷೇತ್ರದಲ್ಲಿ ಪರಿಶೀಲನೆ ನಡೆಸಿದಾಗ ಇದು ನಮ್ಮ ಗಮನಕ್ಕೆ ಬಂದಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಇದೇ ಡ್ರಾಮಾ ನಡೆಯುತ್ತಿದೆ ಎಂದು ನನಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ. ಒಂದು ಕ್ಷೇತ್ರದಲ್ಲಿ 45, 50, 60, 65 ವರ್ಷ ಎಂದು ಹೇಳಿಕೊಂಡು ಸಾವಿರಾರು ಮತದಾರರ ಸೇರ್ಪಡೆಯಾಗಿದೆ. ಇದು ಒಂದು ವಿಷಯವಾದರೆ, ಮತದಾರರ ಹೆಸರನ್ನು ಅಳಿಸುವಿಕೆ, ಅಕ್ರಮವಾಗಿ ಹೊಸ ಹೆಸರು ಸೇರ್ಪಡೆ ಮುಂತಾದ ಅಕ್ರಮಗಳನ್ನು ಪತ್ತೆ ಮಾಡಿದ್ದೇವೆ’ಎಂದು ಅವರು ಹೇಳಿದ್ಧಾರೆ.
‘ನಾನು ಚುನಾವಣಾ ಆಯೋಗಕ್ಕೆ ಒಂದು ಸಂದೇಶ ಕಳುಹಿಸಲು ಬಯಸುತ್ತೇನೆ. ನೀವು ಇದರಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿದ್ದರೆ ಅದು ಸಾಧ್ಯವಿಲ್ಲ. ನೀವು ತಪ್ಪು ಮಾಡಿದ್ದೀರಿ. ನಾವು ಆ ತಪ್ಪಿನ ಕುರಿತಾದ ಪುರಾವೆ ಜೊತೆ ನಿಮ್ಮ ಬಳಿಗೆ ಬರಲಿದ್ದೇವೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ದೊಡ್ಡ ಪ್ರಮಾಣದಲ್ಲಿ ಚುನಾವಣಾ ಅಕ್ರಮ ನಡೆದಿದೆ. ಈ ಭಯಂಕರ ಮತ ಕಳ್ಳತನದ ‘ಕಾರ್ಯ ವಿಧಾನ’ವನ್ನು ಶೀಘ್ರದಲ್ಲೇ ಯಥಾವತ್ತಾಗಿ ಚುನಾವಣಾ ಆಯೋಗ ಮತ್ತು ಜನರ ಮುಂದಿಡುತ್ತೇವೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.