ADVERTISEMENT

ಗಡಿ ವಿವಾದ | ಕರ್ನಾಟಕ ನಮಗೆ ಸವಾಲು ಹಾಕಬಾರದು: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಡಿಸೆಂಬರ್ 2022, 13:14 IST
Last Updated 28 ಡಿಸೆಂಬರ್ 2022, 13:14 IST
ಬಸವರಾಜ ಬೊಮ್ಮಾಯಿ ಮತ್ತು ಏಕನಾಥ ಶಿಂದೆ
ಬಸವರಾಜ ಬೊಮ್ಮಾಯಿ ಮತ್ತು ಏಕನಾಥ ಶಿಂದೆ   

ಮುಂಬೈ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿ.ಎಂ ಏಕನಾಥ ಶಿಂದೆ ಪ್ರತಿಕ್ರಿಯಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಗಡಿ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ನಮಗೆ ಸವಾಲು ಹಾಕಬಾರದು’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಸೇರಿದಂತೆ 865 ಹಳ್ಳಿಗಳ ಒಂದು ಇಂಚು ಭೂಮಿಯನ್ನು ನಾವು ಬಿಟ್ಟುಕೊಡುವುದಿಲ್ಲ. ಅದಕ್ಕಾಗಿ ನಾವು ಕಾನೂನು ರೀತಿಯಲ್ಲಿ ಏನು ಬೇಕಾದರೂ ಮಾಡುತ್ತೇವೆ. ಈ ಕುರಿತು ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ’ ಎಂದು ಶಿಂದೆ ಕಿಡಿಕಾರಿದ್ದಾರೆ.

ADVERTISEMENT

ಶಿಂದೆ ಹೇಳಿಕೆಯಿಂದಾಗಿ ಗಡಿಗೆ ಸಂಬಂಧಿಸಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಜಟಾಪಟಿ ಇನ್ನಷ್ಟು ಬಿರುಸು ಪಡೆದುಕೊಂಡಿದೆ.

ಇತ್ತೀಚೆಗಷ್ಟೇ ಉಭಯ ರಾಜ್ಯಗಳ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಹಾಗೂ ಸಮನ್ವಯದಿಂದ ವರ್ತಿಸಿ ಸೌಹಾರ್ದ ಕಾಪಾಡಲು ಉಭಯ ರಾಜ್ಯಗಳ ಆರು ಸಚಿವರ ಸಮಿತಿಯನ್ನು ರಚಿಸುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.

ಗಡಿ ವಿವಾದದ ಕುರಿತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಉಭಯ ರಾಜ್ಯಗಳ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾತ್ರಿ ಸಭೆ ನಡೆಸಿದ್ದರು.

‘ಗಡಿ ವಿವಾದ ಇತ್ಯರ್ಥ ಹಾಗೂ ಸಾಂವಿಧಾನಿಕ ಚೌಕಟ್ಟಿನಲ್ಲಿ ಪರಿಹಾರಕ್ಕಾಗಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಸಭೆ ನಡೆಸಲಾಯಿತು. ಇಬ್ಬರು ಮುಖ್ಯಮಂತ್ರಿಗಳು ಸಕಾರಾತ್ಮಕ ಧೋರಣೆ ಹೊಂದಿದ್ದಾರೆ. ಈ ವಿವಾದವನ್ನು ಬೀದಿಗಿಳಿದು ಪರಿಹರಿಸಲು ಸಾಧ್ಯವಿಲ್ಲ. ಸಂವಿಧಾನದ ಚೌಕಟ್ಟಿನಲ್ಲೇ ಬಗೆಹರಿಸಬೇಕಿದೆ. ಹೀಗಾಗಿ, ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಶಾ ತಿಳಿಸಿದ್ದರು.

ಓದಿ...ಮೋದಿ ತಾಯಿ ಹೀರಾಬೆನ್ ಅಸ್ವಸ್ಥ: ಶೀಘ್ರ ಗುಣಮುಖರಾಗಿ ಎಂದು ರಾಹುಲ್ ಹಾರೈಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.