ADVERTISEMENT

ಶಾ ಸಭೆಯ ನಿರ್ಧಾರ ಉಲ್ಲಂಘಿಸಿದ ಕರ್ನಾಟಕ - ಮಹಾರಾಷ್ಟ್ರ ವಿಧಾನಸಭೆಯಲ್ಲಿ ಚರ್ಚೆ

ಬೆಳಗಾವಿ ಗಡಿಯಲ್ಲಿ ಮಾನೆಗೆ ತಡೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 22:15 IST
Last Updated 19 ಡಿಸೆಂಬರ್ 2022, 22:15 IST
   

ನಾಗ್ಪುರ : ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಸ್ಥಿಕೆಯಲ್ಲಿ ತೆಗೆದುಕೊಂಡಿದ್ದ ನಿಲುವನ್ನು ಕರ್ನಾಟಕವು ಉಲ್ಲಂಘಿಸಿದೆ ಎಂಬ ಅಭಿಪ್ರಾಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವ್ಯಕ್ತವಾಗಿದೆ. ಗೃಹಸಚಿವರ ಸಭೆಯಲ್ಲಿ ಒಪ್ಪಿಕೊಂಡಿದ್ದ ವಿಚಾರವನ್ನು ಕರ್ನಾಟಕವು ಉಲ್ಲಂಘಿಸಿದ್ದರ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಜತೆಗೆ ಚರ್ಚಿಸುತ್ತೇವೆ ಎಂದು ಮಹಾರಾಷ್ಟ್ರ ಸರ್ಕಾರವು ಹೇಳಿದೆ.

ಬೆಳಗಾವಿಗೆ ಭೇಟಿ ನೀಡಲು ಮುಂದಾಗಿದ್ದ ಶಿವಸೇನಾ (ಶಿಂದೆ ಬಣ) ಸಂಸದ ಧೈರ್ಯಶೀಲ್‌ ಮಾನೆ ಅವರನ್ನು ಕರ್ನಾಟಕದ ಅಧಿಕಾರಿಗಳು ಗಡಿಯಲ್ಲೇ ತಡೆದ ವಿಚಾರವು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಚರ್ಚೆಗೆ ಬಂದಿತು.

ಮಾನೆ ಅವರನ್ನು ತಡೆದ ವಿಚಾರವನ್ನು ಮಹಾರಾಷ್ಟ್ರ ವಿಧಾನಸಭಾ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಅವರು ಪ್ರಸ್ತಾಪಿಸಿದರು. ಕೇಂದ್ರ ಗೃಹ ಸಚಿವರ ಮಧ್ಯಸ್ಥಿಕೆಯ ಸಭೆಯ ಪ್ರಕಾರ ಯಾರ ಓಡಾಟಕ್ಕೂ ಅಡ್ಡಿ ಪಡಿಸಬಾರದು. ಆದರೆ, ಇಂದು ಮಹಾರಾಷ್ಟ್ರದ ಚುನಾಯಿತ ಪ್ರತಿನಿಧಿಯನ್ನು ಗಡಿಯಲ್ಲೇ ತಡೆಯಲಾಗಿದೆ. ಈ ಮೂಲಕ ಸಭೆಯ ನಿರ್ಧಾರಗಳನ್ನು ಕರ್ನಾಟಕ ಉಲ್ಲಂಘಿಸಿದೆ ಎಂದು ಅಜಿತ್ ಪವಾರ್‌ ಆರೋಪಿಸಿದರು.

ADVERTISEMENT

‘ಯಾರಿಗೂ ತಡೆ ಒಡ್ಡುವುದಿಲ್ಲ ಎಂಬುದಕ್ಕೆಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ಸೂಚಿಸಿದ್ದರು. ಆದರೆ, ಕರ್ನಾಟಕದ ಒಬ್ಬ ಜಿಲ್ಲಾಧಿಕಾರಿ ಮಹಾರಾಷ್ಟ್ರದ ಜನಪ್ರತಿನಿಧಿ ಮತ್ತು ಜನರನ್ನು ತಡೆದಿದ್ದಾರೆ. ಬೊಮ್ಮಾಯಿ ಹೇಳಿದ್ದನ್ನು, ಒಬ್ಬ ಜಿಲ್ಲಾಧಿಕಾರಿ ಕೇಳುವುದಿಲ್ಲವೇ? ನಮ್ಮ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಈ ವಿಚಾರದಲ್ಲಿ ಗಟ್ಟಿ ನಿಲುವು ತೆಗೆದುಕೊಳ್ಳಬೇಕು’ ಎಂದು ಅಜಿತ್ ಪವಾರ್ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಏಕನಾಥ ಶಿಂದೆ, ‘ಪವಾರ್ ಅವರು ಎತ್ತಿದ ವಿಚಾರವು ಅತ್ಯಂತ ಪ್ರಮುಖವಾದುದು ಎಂಬುದು ಸತ್ಯ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವರೊಬ್ಬರು ಮಧ್ಯಪ್ರವೇಶಿಸಿದ್ದು ಇದೇ ಮೊದಲು.ಅವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಗಡಿ ಭಾಗದಲ್ಲಿನ ಜನರ ಜತೆಗೆ ನಾವು ನಿಲ್ಲಬೇಕು, ಅವರ ಕಷ್ಟಗಳಿಗೆ ನಾವು ಜತೆಯಾಗಬೇಕು. ಅವರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸಬಾರದು’ ಎಂದು ಹೇಳಿದರು.

‘ಮಹಾರಾಷ್ಟ್ರದ ವಾಹನಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ಮತ್ತು ಕಾನೂನಿಗೆ ವಿರುದ್ಧವಾದುದು. ಇಂತಹ ಘಟನೆಗಳು ನಡೆಯಬಾರದು. ಏಕೆಂದರೆ ಇಂತಹ ಕ್ರಿಯೆಗಳಿಗೆ ತಕ್ಕ ಪ್ರತಿಕ್ರಿಯೆಗಳು ವ್ಯಕ್ತವಾಗಬಹುದು’ ಎಂದು ಅವರು ಹೇಳಿದ್ದಾರೆ.

****
ಯಾರನ್ನೂ ತಡೆಯಬಾರದು ಎಂಬುದು ಅಮಿತ್‌ ಶಾ ಮಧ್ಯಸ್ಥಿಕೆಯಲ್ಲಿ ನಿರ್ಧಾರವಾಗಿತ್ತು. ಆದರೂ ಸಂಸದರೊಬ್ಬರನ್ನು ಕರ್ನಾಟಕದ ಜಿಲ್ಲಾಧಿಕಾರಿ ತಡೆದದ್ದು ಹೇಗೆ?

-ಅಜಿತ್ ಪವಾರ್, ಮಹಾರಾಷ್ಟ್ರ ವಿಧಾನಸಭಾ ವಿರೋಧ ಪಕ್ಷದ ನಾಯಕ

****

ಇದು ಮಹಾರಾಷ್ಟ್ರದ ಆತ್ಮಗೌರವದ ವಿಚಾರ. ಇದರಲ್ಲಿ ಮಹಾರಾಷ್ಟ್ರ ಪರ ನಿಲುವನ್ನು ತೆಗೆದುಕೊಳ್ಳಬೇಕು ಎಂದು ನಾವು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದೇವೆ

-ಏಕನಾಥ ಶಿಂದೆ, ಮಹಾರಾಷ್ಟ್ರ ಮುಖ್ಯಮಂತ್ರಿ

****

ಕೇಂದ್ರ ಗೃಹ ಸಚಿವರ ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಧಾರವನ್ನು ಕರ್ನಾಟಕ ಉಲ್ಲಂಘಿಸಿದೆ. ಈ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಜತೆ ಮಾತನಾಡುತ್ತೇವೆ.

- ದೇವೇಂದ್ರ ಫಡಣವೀಸ್‌, ಮಹಾರಾಷ್ಟ್ರ ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.