ADVERTISEMENT

ಕರ್ನಾಟಕದ ರೈಲ್ವೆ ಯೋಜನೆಗೆ ₹6,091 ಕೋಟಿ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 2:41 IST
Last Updated 8 ಡಿಸೆಂಬರ್ 2022, 2:41 IST
   

ನವದೆಹಲಿ: ‘ಕರ್ನಾಟಕದ ರೈಲ್ವೆ ಯೋಜನೆಗಳಿಗೆ 2022–23ನೇ ಸಾಲಿನಲ್ಲಿ ₹6,091 ಕೋಟಿ ಹಣ ಒದಗಿಸಲಾಗಿದೆ. ಇದು ಕರ್ನಾಟಕಕ್ಕೆ ವರ್ಷವೊಂದರಲ್ಲಿ ಒದಗಿಸಿರುವ ದಾಖಲೆ ಮೊತ್ತ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಸಂಸದರಾದ ಶಿವಕುಮಾರ್ ಸಿ.ಉದಾಸಿ ಹಾಗೂ ಜಿ.ಎಂ.ಸಿದ್ದೇಶ್ವರ ಅವರ ಪ್ರಶ್ನೆಗಳಿಗೆ ಬುಧವಾರ ಲಿಖಿತ ಉತ್ತರ ನೀಡಿರುವ ಸಚಿವರು, ‘2009–2014ರ ಅವಧಿಗೆ ಹೋಲಿಸಿದರೆ ವರ್ಷವೊಂದಕ್ಕೆ ಒದಗಿಸಿರುವ ಅನುದಾನ ಆರು ಪಟ್ಟು (ಶೇ 625) ಹೆಚ್ಚಾಗಿದೆ. 2009–14ರ ಅವಧಿಯಲ್ಲಿ ವಾರ್ಷಿಕ ₹835 ಕೋಟಿ ಒದಗಿಸಲಾಗುತ್ತಿತ್ತು. ಇದರಲ್ಲಿ ರಾಜ್ಯದಲ್ಲಿ ಅನುಷ್ಠಾನವಾಗುತ್ತಿರುವ ಹಾಗೂ ರಾಜ್ಯದ ಮೂಲಕ ಹಾದು ಹೋಗುತ್ತಿರುವ ಯೋಜನೆಗಳು ಸೇರಿವೆ’ ಎಂದು ತಿಳಿಸಿದ್ದಾರೆ.

‘ಕರ್ನಾಟಕದಲ್ಲಿ ಹೊಸ ಮಾರ್ಗಗಳ ನಿರ್ಮಾಣ, ದ್ವಿಪಥ, ಗೇಜ್‌ ಪರಿವರ್ತನೆ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಒದಗಿಸುತ್ತಿರುವ ಹಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2014–19ನೇ ಸಾಲಿನಲ್ಲಿ ಪ್ರತಿವರ್ಷ ₹2,702 ಕೋಟಿ ಒದಗಿಸಲಾಗಿದೆ. 2019–20ರಲ್ಲಿ ₹3,386 ಕೋಟಿ, 2020–21ರಲ್ಲಿ ₹4,220 ಕೋಟಿ, 2021–22ರಲ್ಲಿ ₹4,227 ಕೋಟಿ ಒದಗಿಸಲಾಗಿದೆ’ ಎಂದು ಅವರು ವಿವರ ನೀಡಿದ್ದಾರೆ.

ADVERTISEMENT

‘14 ಯೋಜನೆಗಳನ್ನು ಕರ್ನಾಟಕ ಸರ್ಕಾರದ ಅನುದಾನದ (ಶೇ 50) ನೆರವಿನಿಂದ ಕಾರ್ಯಗತಗೊಳಿಸಲಾಗುತ್ತಿದೆ. ವೆಚ್ಚ ಹಂಚಿಕೆಯ 1674 ಕಿ.ಮೀ. ಕಾಮಗಾರಿಗಳಿಗೆ ₹18,811 ಕೋಟಿ ವೆಚ್ಚ ಮಾಡಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.