ADVERTISEMENT

ದೆಹಲಿ: ನವೆಂಬರ್‌ನಲ್ಲಿ ‘ಕರ್ನಾಟಕ ಉತ್ಸವ’

ಸರ್ಕಾರದಿಂದ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 19:23 IST
Last Updated 2 ಅಕ್ಟೋಬರ್ 2018, 19:23 IST

ನವದೆಹಲಿ: ಅತ್ಯಂತ ಶ್ರೀಮಂತವಾಗಿರುವ ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ರಾಷ್ಟ್ರದ ಇತರ ರಾಜ್ಯದವರಿಗೂ ಪರಿಚಯಿಸುವ ಉದ್ದೇಶದಿಂದ ದೆಹಲಿಯಲ್ಲಿ ಸ್ಥಳೀಯ ಸರ್ಕಾರವು ನವೆಂಬರ್‌ನಲ್ಲಿ ‘ಕರ್ನಾಟಕ ಉತ್ಸವ’ ಹಮ್ಮಿಕೊಳ್ಳಲಿದೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ತಿಳಿಸಿದರು.

ಯಕ್ಷ ಧ್ರುವ ಪಟ್ಲ ಪ್ರತಿಷ್ಠಾನ ಟ್ರಸ್ಟ್‌ನ ಸ್ಥಳೀಯ ಘಟಕವು ಕರ್ನಾಟಕ ಸಂಘದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಯಕ್ಷ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಅವರು ‘ಪಟ್ಲ ಯಾನ’ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.

ರಾಷ್ಟ್ರ ರಾಜಧಾನಿಯಲ್ಲಿ ಆಯಾ ಭಾಷಾ ಅಕಾಡೆಮಿಗಳು ಇರಬೇಕು ಎಂಬುದು ಜನರ ಬಯಕೆಯಾಗಿದೆ. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯು ದೆಹಲಿಯಲ್ಲಿ ನೆಲೆಸಿರುವ ವಿವಿಧ ರಾಜ್ಯಗಳ ಜನಸಾಮಾನ್ಯರನ್ನೂ ತಲುಪಬೇಕಿದೆ. ಕನ್ನಡದ ಪ್ರಮುಖ ಕೃತಿಗಳನ್ನು ಹಿಂದಿಗೆ ಅನುವಾದಿಸಲು ಸರ್ಕಾರವು ಕನ್ನಡ ಭಾಷಾ ಅಕಾಡೆಮಿ ಸ್ಥಾಪಿಸಲು ಮುಂದಾಗಿದೆ. 15 ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು.

ADVERTISEMENT

ಜಾಗತಿಕ ಸೈಬರ್ ಲೋಕದ ಮಹಾದ್ವಾರವಾಗಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕೆಲಸ ಮಾಡಬೇಕೆಂಬುದು ದೇಶದ ಯುವಜನರ ಕನಸಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಹೋಗುವ ಅನ್ಯಭಾಷಿಕರಿಗೆ ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಿಸರದ ಪರಿಚಯವಿರಲಿ ಎಂಬ ಕಾರಣದಿಂದ ಅಕಾಡೆಮಿ ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಕಲಾವಿದರಾದ ಉಮೇಶ್ ಶೆಟ್ಟಿ ಉಬರಡ್ಕ, ಬಿಂದಿಯಾ ಶೆಟ್ಟಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಸಾಹಿತಿ ಎಚ್.ಎಸ್. ಶಿವಪ್ರಕಾಶ್ ಅಧ್ಯಕ್ಷತೆವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಸತೀಶ ಶೆಟ್ಟಿ ಹಾಜರಿದ್ದರು.

ಕಾರ್ಯಕ್ರಮದ ಅಂಗವಾಗಿ ‘ಭೀಷ್ಮ ಸೇನಾಧಿಪತ್ಯ’ ತಾಳ ಮದ್ದಳೆ, ಯಕ್ಷಗಾನ ನಾಟ್ಯ ವೈಭವ, ‘ಗಜೇಂದ್ರ ಮೋಕ್ಷ’ ಯಕ್ಷಗಾನ ಪ್ರಸಂಗದ ಪ್ರದರ್ಶನ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.