ADVERTISEMENT

ಸೌಹಾರ್ದ ಸಮ್ಮಾನ ಪುರಸ್ಕಾರಕ್ಕೆ ಲಕ್ಷ್ಮಿನಾರಾಯಣ ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 21:30 IST
Last Updated 4 ಆಗಸ್ಟ್ 2022, 21:30 IST
ಆರ್‌.ಲಕ್ಷ್ಮಿನಾರಾಯಣ
ಆರ್‌.ಲಕ್ಷ್ಮಿನಾರಾಯಣ   

ನವದೆಹಲಿ: ಉತ್ತರ ಪ್ರದೇಶದ ಹಿಂದಿ ಸಂಸ್ಥಾನ ನೀಡುವ 2021ನೇ ಸಾಲಿನ ಸೌಹಾರ್ದ ಸಮ್ಮಾನ ಪುರಸ್ಕಾರಕ್ಕೆ ಕನ್ನಡದ ಹಿರಿಯ ಲೇಖಕ ಡಾ.ಆರ್‌.ಲಕ್ಷ್ಮಿನಾರಾಯಣ ಆಯ್ಕೆಯಾಗಿದ್ದಾರೆ.

ಹಿಂದಿಯೇತರ ಪ್ರದೇಶದ ಲೇಖಕರು, ಹಿಂದಿ ಮತ್ತು ಆಯಾ ಪ್ರಾದೇಶಿಕ ಭಾಷೆಗಳ ನಡುವೆ ಸೌಹಾರ್ದ ಸಂವರ್ಧನೆಗಾಗಿ ಅನುವಾದದ ಮೂಲಕ ನೀಡಿರುವ ಕೊಡುಗೆಗಾಗಿ ಈ ಪುರಸ್ಕಾರನೀಡಲಾಗುತ್ತದೆ. ₹2.5 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

1949ರ ಡಿಸೆಂಬರ್‌ 2ರಂದು ತುಮಕೂರಿನಲ್ಲಿ ಜನಿಸಿದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. 1971ರಿಂದ 2006ರ ವರೆಗೆ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕ, ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. 2006ರಿಂದ 2007ರ ವರೆಗೆ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.

ADVERTISEMENT

ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದ ಮಾಜಿ ಅಧ್ಯಕ್ಷರಾಗಿರುವಲಕ್ಷ್ಮಿನಾರಾಯಣ ಅವರು 6 ಕೃತಿಗಳನ್ನು ರಚಿಸಿದ್ದಾರೆ ಹಾಗೂ 17 ಕೃತಿಗಳನ್ನು ಅನುವಾದ ಮಾಡಿದ್ದಾರೆ. ಪ್ರಾಕೃತ ಕನ್ನಡ ಬೃಹತ್‌ ನಿಘಂಟು ರಚಿಸಿದ್ದಾರೆ. ‘ಮಾಸ್ತಿ’, ‘ಆಹ್ಲಾದ’, ‘ಎಸ್‌.ವಿ.ಪರಮೇಶ್ವರ ಭಟ್ಟ’(ವಿಮರ್ಶಾ ಕೃತಿಗಳು), ‘ಚಿನ್ನದ ಕಳಶ’,
‘ಇನ್ನೊಬ್ಬ ದ್ರೋಣಾಚಾರ್ಯ’, ‘ವಾಜಿಯ ವಿವೇಕ’, ‘ರುದ್ರ ಭಟ್ಟ’, ‘ಎಂ.ವಿ.ಸೀ. ಸಮಗ್ರ ಸಾಹಿತ್ಯ ಸಂಪುಟ–4’, ‘ಹೊಸಗನ್ನಡ ಕಾವ್ಯ ಸಂಗ್ರಹ’ ಅವರ ಪ್ರಮುಖ ಕೃತಿಗಳು.

ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುವೆಂಪು ಭಾಷಾ ಭಾರತಿಯ ವಿಶೇಷ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.